ನವದೆಹಲಿ[ಜೂ.18]: ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಕೇಂದ್ರದ ಮಾಜಿ ಸಚಿವ ಜೆ.ಪಿ.ನಡ್ಡಾ ಅವರನ್ನು ಬಿಜೆಪಿ ಕಾರ್ಯಾಧ್ಯಕ್ಷರಾಗಿ ಸೋಮವಾರ ನೇಮಕ ಮಾಡಲಾಗಿದೆ. ಪಕ್ಷದ ಹಾಲಿ ಅಧ್ಯಕ್ಷರಾಗಿರುವ ಅಮಿತ್‌ ಶಾ ಅವರು ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಸೋಮವಾರ ಇಲ್ಲಿ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ಸಾಂಸ್ಥಿಕ ಚುನಾವಣೆ ಮುಗಿಯುವವರೆಗೂ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯುವಂತೆ, ಸಂಸದೀಯ ಮಂಡಳಿ ಸಭೆ ಅಮಿತ್‌ ಶಾ ಅವರನ್ನು ಕೋರಿತು. ಆದರೆ, ಗೃಹ ಸಚಿವರಾಗಿ ತಾವು ಹಲವಾರು ವಿಷಯಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆಯನ್ನು ಅಮಿತ್‌ ಶಾ ಸಭೆಯಲ್ಲಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾ ಅವರ ಕಾರ್ಯಭಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡ್ಡಾ ಅವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡುವ ನಿರ್ಧಾರಕ್ಕೆ ಸಂಸದೀಯ ಮಂಡಳಿ ಬಂದಿತು ಎಂದು ಮೂಲಗಳು ತಿಳಿಸಿವೆ.

ಅಮಿತ್‌ ಶಾ ಅವರ ಅವಧಿ 2019ರ ಡಿಸೆಂಬರ್‌ನಲ್ಲಿ ಕೊನೆಗೊಳ್ಳಲಿದೆ. ಪಕ್ಷದಲ್ಲಿ ‘ಒಬ್ಬರಿಗೆ ಒಂದೇ ಹುದ್ದೆ’ ಎಂಬ ಆದರ್ಶದಂತೆ ಅಮಿತ್‌ ಶಾ ಅವರ ಅವಧಿಯನ್ನು ಮತ್ತೊಮ್ಮೆ ವಿಸ್ತರಿಸುವ ಸಾಧ್ಯತೆ ಇಲ್ಲ. ಆಗ ಬಹುಷಃ ನಡ್ಡಾ ಅವರನ್ನೇ ಮುಂದುವರೆಸುವ ಸಾಧ್ಯತೆ ಇದೆ.

ಜೂ.6ರಂದು ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಈ ಪ್ರಕ್ರಿಯೆ ಮುಗಿಯಲು ಹಲವಾರು ತಿಂಗಳು ಬೇಕಾಗಲಿದೆ. ಅಲ್ಲದೇ ವರ್ಷಾಂತ್ಯದಲ್ಲಿ ಹರ್ಯಾಣ, ಜಾರ್ಖಂಡ್‌ ಮತ್ತು ಮಹಾರಾಷ್ಟ್ರ ಚುನಾವಣೆಗಳು ಎದುರಾಗಲಿದ್ದು, ಈ ಚುನಾವಣೆಯನ್ನು ಬಿಜೆಪಿ ಅಮಿತ್‌ ಶಾ ಅವರ ನೇತೃತ್ವದಲ್ಲೇ ಎದುರಿಸಲಿದೆ.

ಮೂರು ಬಾರಿಯ ಶಾಸಕ ಹಾಗೂ, ರಾಜ್ಯಸಭೆಯಲ್ಲಿ ಹಿಮಾಚಲ ಪ್ರದೇಶವನ್ನು ಪ್ರತಿನಿಧಿಸುತ್ತಿರುವ ನಡ್ಡಾ, ಪಕ್ಷದ ಉನ್ನತ ಮುಖಂಡರ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶ ಜವಾಬ್ದಾರಿ ವಹಿಸಲಾಗಿತ್ತು. ಅದರಲ್ಲಿ ಬಿಜೆಪಿ 80ರಲ್ಲಿ 62 ಸ್ಥಾನಗಳನ್ನು ಗೆದ್ದುಕೊಂಡಿದೆ.