370 ರದ್ದು: ಮೋದಿ ಸರ್ಕಾರಕ್ಕೆ ಬಹುಪರಾಕ್ ಎಂದ ಕಾಂಗ್ರೆಸ್ ಮಾಜಿ ಸಿಎಂ
ಕಾಂಗ್ರೆಸ್ ಕಟ್ಟಾಳು, ಮಾಜಿ ಮುಖ್ಯಮಂತ್ರಿಯೊಬ್ಬರು ನೀಡಿದ ಹೇಳಿಕೆಯೊಂದು ಹಲವರ ಹುಬ್ಬೇರಿಸಿದ್ದು, ತಮ್ಮ ಪಕ್ಷದ ವಿರುದ್ಧ ಮಾತಾಡಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದಾರೆ.
ರೋಸ್ಟಕ್ [ಹರಿಯಾಣ], [ಆ.18]: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡುತ್ತೇನೆ ಎಂದು ಹೇಳಿರುವ ಹೂಡಾ, ತನ್ನ ಪಕ್ಷ ಕಾಂಗ್ರೆಸ್ ದಾರಿ ತಪ್ಪಿದೆ ಎಂದು ಸ್ವಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.
ಹರಿಯಾಣದಲ್ಲಿ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಹಾಗೂ ವಿವಿಧ ಹುದ್ದೆ ನಿಭಾಯಿಸಿರುವ ಭೂಪೇಂದ್ರ ಸಿಂಗ್ ಹೂಡಾ, 4 ದಶಕಗಳಿಂದ ಕಾಂಗ್ರೆಸ್ನಲ್ಲಿದ್ದವರು. ಈಗ ತಮ್ಮ ಪಕ್ಷದ ವಿರುದ್ಧ ಮಾತಾಡಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟಕ್ಕೂ ಹೂಡಾ ಏನು ಮಾತನಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ಇಂದು [ಭಾನುವಾರ] ಹರಿಯಾಣದ ರೋಸ್ಟಕ್ನಲ್ಲಿ ನಡೆದ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಹೂಡಾ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಸರ್ಕಾರ ಸರಿಯಾದದ್ದನ್ನು ಮಾಡಿದಾಗ ನಾವು ಅದನ್ನು ಒಪ್ಪಿಕೊಳ್ಳಬೇಕು. ಆದ್ರೆ ಇದನ್ನು ನಮ್ಮ ಹಲವು ಸಹೋದ್ಯೋಗಿಗಳು ವಿರೋಧಿಸುತ್ತಿದ್ದಾರೆ ಎಂದು ಮೋದಿ ಸರ್ಕಾರದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನನ್ನ ಪಕ್ಷ ಸಣ್ಣ ಪ್ರಮಾಣದಲ್ಲಿ ದಾರಿ ತಪ್ಪಿದೆ. ಇದು ಹಳೇ ಕಾಂಗ್ರೆಸ್ ಆಗಿ ಉಳಿದಿಲ್ಲ. ದೇಶಭಕ್ತಿ ಹಾಗೂ ಆತ್ಮಗೌರವದ ವಿಚಾರಕ್ಕೆ ಬಂದರೆ ನಾನು ಯಾವ ಕಾರಣಕ್ಕೂ ಯಾರೊಂದಿಗೂ ರಾಜಿಯಾಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ಹರಿಯಾಣದ ಹಲವು ನಮ್ಮ ಸಹೋದರರು ಕಾಶ್ಮೀರದಲ್ಲಿ ನಿಯೋಜನೆಗೊಂಡಿದ್ದಾರೆ. ಈಗ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.
ನವೆಂಬರ್ನಲ್ಲಿ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಬಗ್ಗೆ ಪ್ರಸ್ತಾಪ ಮಾಡಿದ ಹೂಡಾ, ನಾನು ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ. ಅದು ಕಾಂಗ್ರೆಸ್ನಿಂದಲೇ ಆಗಬೇಕು ಎಂದೇನಿಲ್ಲ. ಒಟ್ಟಿನಲ್ಲಿ ನಾನು ಸಿಎಂ ಅಭ್ಯರ್ಥಿ ಎಂದು ಭೂಪೇಂದ್ರ ಸಿಂಗ್ ಹೂಡಾ ಸಭೆಯಲ್ಲಿ ಖಡಕ್ ಆಗಿ ಹೇಳಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.