ನವದೆಹಲಿ[ಜು.22]: 15 ವರ್ಷಗಳ ಕಾಲ ದೆಹಲಿ ಮುಖ್ಯಮಂತ್ರಿಯಾಗಿದ್ದ, ಈ ಅವಧಿಯಲ್ಲಿ ರಾಷ್ಟ್ರ ರಾಜಧಾನಿಗೆ ಆಧುನಿಕ ಸ್ವರೂಪ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಯಿತು. ಧಾರಾಕಾರ ಮಳೆ ಹಾಗೂ ಗಾಳಿಯ ನಡುವೆಯೇ ಶೀಲಾ ಅವರಿಗೆ ಆತ್ಮೀಯರು, ಸಹೋದ್ಯೋಗಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಭಾವಪೂರ್ಣ ವಿದಾಯ ಹೇಳಿದರು.

ಹೃದಯ ಸ್ತಂಭನದಿಂದ ಶನಿವಾರ ಇಹಲೋಕ ತ್ಯಜಿಸಿದ್ದ ಶೀಲಾ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್‌ಬೋಧ್‌ ಘಾಟ್‌ನಲ್ಲಿ ನಡೆಯಿತು. ಈ ವೇಳೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರಿ ಪ್ರಿಯಾಂಕಾ ಗಾಂಧಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಸಿಎನ್‌ಜಿ ಚಿತಾಗಾರದಲ್ಲಿ ಶೀಲಾ ಅಂತ್ಯಕ್ರಿಯೆ!

ಶೀಲಾ ದೀಕ್ಷಿತ್‌ ಅವರ ಅಂತ್ಯಕ್ರಿಯೆಯನ್ನು ಸಿಎನ್‌ಜಿ ಇಂಧನದಿಂದ ನಡೆಸಲಾಗುವ ಚಿತಾಗಾರದಲ್ಲಿ ನಡೆಸಲಾಗಿದೆ. ಇದು ಶೀಲಾ ದೀಕ್ಷಿತ್‌ ಅವರ ಆಶಯವಾಗಿತ್ತು. ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕೆ ಶೀಲಾ ದೀಕ್ಷಿತ್‌ ಅವರು ದೆಹಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಈ ಮಾದರಿ ವ್ಯವಸ್ಥೆಯನ್ನು ಪರಿಚಯಿಸಿದ್ದರು. ದೆಹಲಿ ನಿವಾಸಿಗಳು ಕೂಡ ಅಂತ್ಯಕ್ರಿಯೆ ವೇಳೆ ಸಿಎನ್‌ಜಿ ಮಾದರಿಯನ್ನೇ ಅನುಸರಿಸಬೇಕು. ಇದು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಕ್ರಮ ಎಂಬುದನ್ನು ಸಾರಿದ್ದರು. ಕಟ್ಟಿಗೆ ಬಳಸಿ ಮಾಡುವ ಅಂತ್ಯಸಂಸ್ಕಾರಕ್ಕೆ ಕನಿಷ್ಠ 1000 ರು. ವೆಚ್ಚವಾಗುತ್ತದೆ. ಜೊತೆಗೆ ಕಟ್ಟಿಗೆ ಪೂರ್ಣ ಸುಡಲು 10 ಗಂಟೆ ಬೇಕು. ಆದರೆ ಸಿಎನ್‌ಜಿ ಚಿತಾಗಾರದಲ್ಲಿ ಕೇವಲ 500 ರು. ವೆಚ್ಚವಾಗುತ್ತದೆ. ಕೇವಲ ಒಂದು ಗಂಟೆಯಲ್ಲಿ ಶವ ಪೂರ್ಣ ಸುಟ್ಟು ಭಸ್ಮವಾಗುತ್ತದೆ.