ಬೆಂಗಳೂರು[ಆ.18]: ರಾಜ್ಯ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿರುವ ಫೋನ್ ಟ್ಯಾಪಿಂಗ್ ಹಗರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದೆ. ಸರ್ಕಾರದ ಈ ನಿರ್ಧಾರದ ಕುರಿತು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ

ಸಿಬಿಐ ತನಿಖೆ ನಿರ್ಧಾರದ ಕುರಿತು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ಪೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐ‌ಗೆ ಒಪ್ಪಿಸುವ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಸ್ವಾಗತಾರ್ಹ. ಆದರೆ  ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ‌‌‌ ಎಂದು ನಂಬಿದ್ದೇನೆ' ಎಂದಿದ್ದಾರೆ.

ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಪೋನ್ ಟ್ಯಾಪಿಂಗ್ ಹಗರಣದ ತನಿಖೆಗೆ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಿಬಿಐ ತನಿಖೆ‌ ನಡೆಸಲು ಆದೇಶ ಮಾಡಲಾಗಿದೆ. 

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಯಡಿಯೂರಪ್ಪ 'ನಾಳೆ ಸೋಮವಾರ ಈ ಸಂಬಂಧ ಆದೇಶ ಹೊರಡಿಸಲಾಗುತ್ತದೆ. ಈ ಬಗ್ಗೆ ಸೂಕ್ತ ‌ತನಿಖೆ ‌ನಡೆದು ವಾಸ್ತವವೇನು ಎಮಬ ವಿಚಾರ ಹೊರ ಬರಬೇಕು ತಪ್ಪಿತಸ್ಥರ ವಿರುದ್ದ ಕ್ರಮವಾಗಬೇಕು. ಹೀಗಾಗಿ ಪೋನ್ ಕದ್ದಾಲಿಕೆ ‌ಪ್ರಕರಣದ ತನಿಖೆಯನ್ನು ಸಿಬಿಐಗೆ‌ ವಹಿಸಲಾಗಿದೆ' ಎಂದಿದ್ದಾರೆ.