ಲೋಕಸಭಾ ಚುನಾವಣೆ: ಕೊಪ್ಪಳ/ಮೈಸೂರಿನಿಂದ ಸಿದ್ದರಾಮಯ್ಯ ಸ್ಪರ್ಧೆ?

First Published 24, Jul 2018, 10:49 AM IST
Former CM Siddaramaiah contest from Koppala or Mysuru to Loksabha Election?
Highlights

-ಲೋಕಸಭಾ ಚುನಾವಣೆ ಸ್ಪರ್ಧೆಗೆ ಸಿದ್ದರಾಮಯ್ಯ  ನಿರಾಕರಣೆ

- ಕೊಪ್ಪಳ/ಮೈಸೂರಿನಿಂದ ಸ್ಪರ್ಧಿಸುವ ಸಾಧ್ಯತೆ 

- ಹಿಂದುಳಿದ ವರ್ಗಗಳ ಮತ ಸೆಳೆಯಲು ಸಿದ್ದರಾಮಯ್ಯ  ಬೇಕೇ ಬೇಕು ಎಂಬುದು ಹೈಕಮಾಂಡ್ ಲೆಕ್ಕಾಚಾರ 

ಬೆಂಗಳೂರು (ಜು. 24): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಇಲ್ಲ ಎನ್ನುತ್ತಿರಬಹುದು. ಆದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಣಕ್ಕೆ ಇಳಿಸುವ ಗಂಭೀರ ಚಿಂತನೆಯನ್ನು ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ.

ಹೀಗಾಗಿ, ಮೈಸೂರು ಅಥವಾ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ  ಅವರು ಸ್ಪರ್ಧಿಸುವ ಸಾಧ್ಯತೆಯೇ ಹೆಚ್ಚು ಎನ್ನುತ್ತವೆ  ಉನ್ನತ ಮೂಲಗಳು. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಾಲಿಗೆ ಅತ್ಯಂತ  ಪ್ರಮುಖವಾಗಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಎರಡು ಗುರಿ ಹೊಂದಿದೆ.

ಒಂದು ತಾನು ಹೆಚ್ಚು ಸ್ಥಾನ ಗೆಲ್ಲುವುದು. ಎರಡು- ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲದಂತೆ ಮಾಡುವುದು. ಈ ಉದ್ದೇಶ ಸಾಧನೆಗಾಗಿಯೇ ಜೆಡಿಎಸ್ ಜತೆ ಮೈತ್ರಿಗೂ ಕಾಂಗ್ರೆಸ್ ಮುಂದಾಗಿದ್ದು, ತಾನು ಗೆಲ್ಲಬಲ್ಲ ಕ್ಷೇತ್ರಗಳ ಪೈಕಿ ಒಂದೆರಡು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಮನಸ್ಥಿತಿಯಲ್ಲೂ ಇದೆ.

ಇಷ್ಟಾದರೂ ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ತೋರಬೇಕು ಎಂದರೆ ಪ್ರಬಲ ಸಮುದಾಯವೊಂದು ತನ್ನ ಬೆನ್ನ ಹಿಂದೆ ನಿಲ್ಲಬೇಕು ಎಂಬ ಅರಿವು ಕಾಂಗ್ರೆಸ್‌ಗೆ ಇದೆ. ಅಲ್ಪಸಂಖ್ಯಾತ ಮತಗಳ ಹೊರತಾಗಿ ಕಾಂಗ್ರೆಸ್ ಪರ ಗಟ್ಟಿಯಾಗಿ
ನಿಲ್ಲುವುದು ಹಿಂದುಳಿದ ವರ್ಗ. ಈ ಸಮುದಾಯ ಪಕ್ಷಕ್ಕೆ ಗಟ್ಟಿಯಾಗಬೇಕು ಎಂದರೆ ಸಿದ್ದರಾಮಯ್ಯ ನೇರವಾಗಿ ಅಖಾಡಕ್ಕೆ ಇಳಿಯಬೇಕು. ಹೀಗಾದಲ್ಲಿ ಮಾತ್ರ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ ಉತ್ತಮ ಸ್ಥಾನಗಳನ್ನು ಪಡೆಯಲು ಸಾಧ್ಯ ಎಂಬ ನಂಬಿಕೆ ಹೈಕಮಾಂಡ್‌ಗೆ ಇದೆ. ಹೀಗಾಗಿ, ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುವಂತೆ ಕಾಂಗ್ರೆಸ್ ಹೈಕಮಾಂಡ್ ನಿರ್ದೇಶಿಸುವ ಸಾಧ್ಯತೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಆದರೆ, ಸದ್ಯಕ್ಕೆ ಸಿದ್ದರಾಮಯ್ಯ ಅವರು ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರುವ  ನಿಲುವನ್ನೇ ಹೊಂದಿದ್ದಾರೆ. ತಮ್ಮ ಆಪ್ತರ ಬಳಿಯೂ  ಇದೇ ಮಾತುಗಳನ್ನೇ ಅವರು ಹೇಳುತ್ತಿದ್ದಾರೆ. ಆದರೆ, ಹೈಕಮಾಂಡ್ ಒತ್ತಾಯ ಮಾಡಿದರೆ ಅವರು ಸ್ಪರ್ಧೆ ಮಾಡಲೇಬೇಕಾಗುತ್ತದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಈ ಮೂಲಗಳ ಪ್ರಕಾರ ಒಂದು ವೇಳೆ ಸಿದ್ದರಾಮಯ್ಯಅವರು ಲೋಕಸಭೆಗೆ ಸ್ಪರ್ಧಿಸಿದರೆ ಬಹುತೇಕ ಮೈಸೂರು ಹೊರತಾದ ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಪ್ರಸ್ತುತ ಅವರ ಮುಂದೆ ಮೈಸೂರು ಹಾಗೂ ಕೊಪ್ಪಳ ಕ್ಷೇತ್ರಗಳ ಆಯ್ಕೆಯಿದೆ. ಈ ಪೈಕಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ  ಎಂದು ಮೂಲಗಳು ಹೇಳಿವೆ. 

loader