Asianet Suvarna News Asianet Suvarna News

ಫೋನ್‌ ಕದ್ದಾಲಿಕೆ: ಎಫ್ ಐಆರ್ ನಲ್ಲಿ ಕುಮಾರಸ್ವಾಮಿ ಹೆಸರೇ ಇಲ್ಲ!

ಫೋನ್‌ ಕದ್ದಾಲಿಕೆ: ಎಫ್‌ಐಆರ್‌ ದಾಖಲಿಸಿಕೊಂಡ ಸಿಬಿಐ | ಎಚ್‌ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನಡೆದೆ ಎನ್ನಲಾದ ಕೇಸ್‌ | ಸಿಬಿಐ ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಮನವಿ ಮಾಡಿದ್ದ ಬಿಎಸ್‌ವೈ ಸರ್ಕಾರ

 

Former CM Kumaraswamy name is not in phone tapping case FIR
Author
Bengaluru, First Published Sep 1, 2019, 1:13 PM IST

ನವದೆಹಲಿ (ಸೆ. 01):  ರಾಜ್ಯ ರಾಜಕಾರಣದಲ್ಲಿ ತೀವ್ರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಫೋನ್‌ ಕದ್ದಾಲಿಕೆ ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಅಧಿಕೃತವಾಗಿ ಕೈಗೆತ್ತಿಕೊಂಡಿದೆ.

ಪ್ರಕರಣದಲ್ಲಿ ನೇರವಾಗಿ ಎಚ್‌.ಡಿ.ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತಾದರೂ ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲೆಲ್ಲೂ ಕುಮಾರಸ್ವಾಮಿ ಅಥವಾ ಯಾವುದೇ ಅಧಿಕಾರಿಯ ಹೆಸರನ್ನಾಗಲಿ ಉಲ್ಲೇಖಿಸಿಲ್ಲ.

ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಆಗಿ ಭಾಸ್ಕರ್‌ ರಾವ್‌ರನ್ನು ನೇಮಿಸಿದ ಸಂದರ್ಭದಲ್ಲಿ ರಾವ್‌ ಅವರು ಕಮಿಷನರ್‌ ಹುದ್ದೆಗಾಗಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರೊಬ್ಬರ ಆಪ್ತರೊಂದಿಗೆ ಲಾಬಿ ನಡೆಸಿದ್ದಾರೆ ಎನ್ನಲಾದ ಆಡಿಯೋವೊಂದು ಬಹಿರಂಗವಾಗಿತ್ತು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಸರ್ಕಾರ ರಾಜ್ಯದ ಹಿರಿಯ ರಾಜಕೀಯ ನಾಯಕರು, ಪತ್ರಕರ್ತರು ಸೇರಿ 300 ಮಂದಿಯ ಫೋನ್‌ ಕದ್ದಾಲಿಕೆ ನಡೆಸಿದೆ ಎಂಬ ಹಳೆಯ ಆರೋಪಕ್ಕೆ ಜೀವ ಬಂತು. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದರು. ಆ ಬಳಿಕ ಪ್ರಕರಣವನ್ನು ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಆ.19ರಂದು ಪತ್ರ ಬರೆದಿತ್ತು.

ಕೇಂದ್ರ ಸರ್ಕಾರ ಈ ಪತ್ರವನ್ನು ಶುಕ್ರವಾರ(ಆ.30) ಸಿಬಿಐಗೆ ಹಸ್ತಾಂತರಿಸಿದೆ. ಅದರಂತೆ ಈ ಪತ್ರವನ್ನೇ ಎಫ್‌ಐಆರ್‌ ಆಗಿ ಪರಿವರ್ತಿಸಿ ಯಾರ ಹೆಸರನ್ನೂ ಉಲ್ಲೇಖಿಸದೆ ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ(2000) ಮತ್ತು ಟೆಲಿಗ್ರಾಫ್‌ ಕಾಯ್ದೆ (1985) ನಿಬಂಧನೆಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಸದಾ ಅಸ್ಥಿರತೆ ಎದುರಿಸುತ್ತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಆಗ ಪ್ರತಿಪಕ್ಷವಾಗಿದ್ದ ಬಿಜೆಪಿ, ಮೈತ್ರಿ ಪಕ್ಷ ಕಾಂಗ್ರೆಸ್‌ ಹಾಗೂ ತಮ್ಮದೇ ಪಕ್ಷದ ಶಾಸಕರು, ನಾಯಕರು ಮತ್ತು ತಮ್ಮದೇ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದವರ ಅವರ ಫೋನ್‌ ಕದ್ದಾಲಿಕೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.

Follow Us:
Download App:
  • android
  • ios