ಮೈಸೂರು (ಸೆ. 20):  ನಾನು 224 ಕ್ಷೇತ್ರದ ಚುನಾವಣೆ ತಯಾರಿ ನಡೆಸುತ್ತಿದ್ದು, ಇನ್ನು ಎರಡ್ಮೂರು ತಿಂಗಳಲ್ಲಿ ಈ ಸರ್ಕಾರ ಏನೇನಾಗುತ್ತೆ ಎಂದು ಕಾದು ನೋಡಿ ಎಂದು ತಿಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳುವುದಕ್ಕೆ ಜ್ಯೋತಿಷ್ಯ ಯಾಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಸರ್ಕಾರದ ಆಯುಷ್ಯದ ಬಗ್ಗೆ ಕೋಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯದ ಬಗ್ಗೆ ಮಂಡ್ಯ ಜಿಲ್ಲೆಯ ಚನ್ನಪಟ್ಟಣ ಹಾಗೂ ಮೈಸೂರುಗಳಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನೇನು ಜ್ಯೋತಿಷಿಯಲ್ಲ. ನಾನು ಆಶಾವಾದಿ, ನಿರಾಶವಾದಿಯಲ್ಲ. ಸರ್ಕಾರ ಹೆಚ್ಚು ದಿನ ಇರುವುದಿಲ್ಲ, ಸದ್ಯದಲ್ಲೇ ನಿಮಗೆ ಎಲ್ಲಾ ವಿಚಾರ ತಿಳಿಯಲಿದೆ. ಸರ್ಕಾರದ ನಡವಳಿಕೆ ನೋಡಿದರೇ ಈ ಸರ್ಕಾರ ಸ್ಥಿರವಲ್ಲ ಎಂದು ತಿಳಿಯುತ್ತದೆ. ಕಾದು ನೋಡಿ ಎಂದರು.

ಶುಭ ಶುಕ್ರವಾರದಂದು ಸಿದ್ದರಾಮಯ್ಯನವರ ಭವಿಷ್ಯ ಹೇಳಿದ ಕೋಡಿಶ್ರೀ..!

ಇದೇವೇಳೆ ಜಿ.ಟಿದೇವೇಗೌಡರಿಗೆ ಟಾಂಗ್‌ ನೀಡಿದ ಎಚ್‌.ಡಿ.ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಕ್ಕೆ ಜಿ.ಟಿ.ದೇವೇಗೌಡರನ್ನೇ ಸಿಎಂ ಮಾಡಬೇಕಿತ್ತಾ ಎಂದು ವ್ಯಂಗ್ಯವಾಡಿದ್ದಾರೆ.

ಅವರಿಗೆ ಮಂತ್ರಿ ಕೊಟ್ಟಿದ್ದು ಅವರನ್ನ ಮುಗಿಸಿದಂತಾಗುತ್ತಾ ಹೇಳಿ? ನಾನು ಮೈಸೂರನ್ನೇ ನೋಡಿರಲಿಲ್ಲ. ನನಗೆ ಮೈಸೂರು ತೋರಿಸಿದ್ದೇ ಜಿಟಿಡಿಯವರಲ್ಲವೇ? ಅವರು ದೊಡ್ಡ ನಾಯಕರು ಎಂದು ಕಾಲೆಳೆದರು.

ಜನವರಿವರೆಗೂ ರಾಜ್ಯಕ್ಕೆ ಜಲಗಂಡಾಂತರ: ಕೋಡಿಶ್ರೀ ಭವಿಷ್ಯ

ಸಿದ್ದು ಬಿಡಿಗಾಸೂ ಕೊಟ್ಟಿಲ್ಲ:

ಜೆಡಿಎಸ್‌ ಪಕ್ಷ ಕಟ್ಟುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬಿಡಿಗಾಸು ಕೊಟ್ಟಿಲ್ಲ. ಸಾಲವೋ ಸೋಲವೋ ಪಕ್ಷ ಉಳಿಸಿದ್ದು ದೇವೇಗೌಡರ ಕುಟುಂಬ. ಕಾರ್ಯಕರ್ತರಿಗೆ ಏನಾದರೂ ನೋಡೋದು ಸಹ ದೇವೇಗೌಡರ ಕುಟುಂಬವೇ. ಸಿದ್ದರಾಮಯ್ಯ ಅವರಾದಿಯಾಗಿ ಯಾರೂ ಒಂದು ಬಿಡಿಗಾಸೂ ಜೆಡಿಎಸ್‌ ಪಕ್ಷ ಸಂಘಟನೆಗೆ ಕೊಟ್ಟಿಲ್ಲ. ಆದರೆ ಅಧಿಕಾರ ಸಿಕ್ಕಾಗ ಮಾತ್ರ ಎಲ್ಲರೂ ಬರುತ್ತಾರೆ. ನಾವೇನೋ ದೊಡ್ಡದಾಗಿ ಪಕ್ಷ ಸಂಘಟನೆ ಮಾಡಿದ್ದಿವಿ ಅಂತ ಮುಂದೆ ನಿಲ್ತಾರೆ. ಆದ್ರೆ ಜೆಡಿಎಸ್‌ ಪಕ್ಷದ ಆರ್ಥಿಕ ಪರಿಸ್ಥಿತಿ ನಮಗೆ ಮಾತ್ರ ಗೊತ್ತಿರೋದು ಎಂದು ಹೇಳಿದರು.

ಕೋಡಿಶ್ರೀ ಭವಿಷ್ಯ ನಿಜವಾದರೆ ಹೆಬ್ಬೆರಳು ತುಂಡರಿಸಿ ಕೊಡುವೆ!

ಇದೇ ವೇಳೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಜಮೀನಿನಲ್ಲಿ ಚಿನ್ನ ಬೆಳೆದಿದ್ದರಾ? ಭತ್ತ ಬೆಳೆದಿದ್ದರಾ ಅಂತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಅದೇ ಡಿ.ಕೆ.ಶಿವಕುಮಾರ್‌ ಕಳೆದ 20 ವರ್ಷದಿಂದ ತೆರಿಗೆ ಕಟ್ಟುವಾಗ ಈ ಪ್ರಶ್ನೆ ಬರಲಿಲ್ಲವಾ? ಅಷ್ಟುವರ್ಷಗಳಿಂದ ಏನು ಬೆಳೆಯುತ್ತಿದ್ದರು ಅನ್ನೋದು ಗೊತ್ತಿಲ್ಲದೆ ಇದ್ದರಾ ಈ ಅಧಿಕಾರಿಗಳು ಎಂದು ಪ್ರಶ್ನಿಸಿದರು.