ಸಂಕೇಶ್ವರ[ಸೆ.06]: ನಾಡಿನಾದ್ಯಂತ ಎದುರಾಗಿರುವ ಪ್ರವಾಹ ಭೀತಿ ಬಗ್ಗೆ ತಾವು ಈ ಹಿಂದೆ ನುಡಿದ ಭವಿಷ್ಯವಾಣಿ ಸತ್ಯವಾಗಿದೆ. ಈ ಜಲಗಂಡಾಂತರ ಬರುವ ಜನವರಿವರೆಗೂ ಮುಂದುವರೆಯಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದರು.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನಮಠದಲ್ಲಿ ಮಹಾದಾಸೋಹ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗುರುವಾರ ಆಗಮಿಸಿದ್ದ ಶ್ರೀಗಳು ಪ್ರವಾಹದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಇಂದಿನ ಜನರಲ್ಲಿ ದೈವಭಕ್ತಿ, ಧರ್ಮಾಚರಣೆ ಅಗತ್ಯವಾಗಿದೆ. ಹೊಟ್ಟೆಹಸಿವು ನೀಗಿಸಿಕೊಳ್ಳುವಷ್ಟೇ ದೈವಭಕ್ತಿ ಆಚರಣೆ ಕೂಡ ಮುಖ್ಯವಾಗಿದೆ. ಆದರೆ, ದೈವ ಹಾದಿ ಮರೆತಿರುವ ಮನುಕುಲಕ್ಕೆ ಸಂಕಷ್ಟಗಳ ಮೂಲಕ ದೈವ ಪರೀಕ್ಷೆಗಳನ್ನು ಒಡ್ಡುತ್ತಿದೆ. ಇಂತಹ ಅಪಾಯಗಳನ್ನು ತಡೆಯುವುದು ದೈವದಿಂದ ಮಾತ್ರ ಸಾಧ್ಯವಿದೆ ಎಂದರು.

ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರಿ ಪ್ರಮಾಣದ ಬದಲಾವಣೆಗಳಾಗಲಿರುವ ಮುನ್ಸೂಚನೆ ನೀಡಿದರು. ‘ಸಂಗಮೇಶನೊಲಿವನೈ ಆದರೆ ಒಳ ಅಡ್ಡ ಬಂದಿದೆ’ ಇದರ ಒಳಾರ್ಥ ಬಿಡಿಸಿದರೆ ಕೆಲವರಿಗೆ ಒಳ್ಳೆಯದೆನಿಸುತ್ತದೆ. ಇನ್ನೂ ಕೆಲವರಿಗೆ ನೋವಾಗಲಿದೆ. ಹೀಗಾಗಿ ಇದರ ಒಳಾರ್ಥ ಈಗಲೇ ಬಿಡಿಸುವುದಿಲ್ಲ. ಮುಂಬರುವ ದಿನಮಾನಗಳಲ್ಲಿ ಇದರ ಅರ್ಥ ತಿಳಿಸುತ್ತೇವೆ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.