ನವದೆಹಲಿ[ಜೂ.18]: ಹೊಸ ಸರ್ಕಾರ ರಚನೆ ಆದಾಗ ಉದ್ಯೋಗಪತಿಗಳು ನೇರವಾಗಿ ಬಂದು ಮಂತ್ರಿಗಳನ್ನು ಭೇಟಿ ಮಾಡಿ ಪರಿಚಯ ಮಾಡಿಕೊಂಡು ವೈಯಕ್ತಿಕ ಸಂಬಂಧ ಬೆಳೆಸುವುದು ವಾಡಿಕೆ. ಪ್ರತಿ 15 ದಿನಕ್ಕೊಮ್ಮೆ ಗುರುವಾರ ದಿಲ್ಲಿಗೆ ಬರುವ ಮುಕೇಶ್‌ ಅಂಬಾನಿ ಕ್ಯಾಬಿನೆಟ್‌ ಸೆಕ್ರೆಟರಿಯಿಂದ ಹಿಡಿದು ಹಿರಿಯ ಮಂತ್ರಿಗಳನ್ನು ಭೇಟಿ ಆಗುತ್ತಾರೆ. ಹಿಂದೆ ವೀರಪ್ಪ ಮೊಯ್ಲಿ ಪೆಟ್ರೋಲಿಯಂ ಸಚಿವರಾದ ಒಂದು ವಾರಕ್ಕೆ ಮೊಯ್ಲಿ ಮನೆಗೆ ಮುಕೇಶ್‌ ತಿಂಡಿಗೆ ಬಂದಿದ್ದರು. ಈ ಬಾರಿ ಕೂಡ ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಸಚಿವರ ಮನೆಗಳಿಗೆ ಹೋಗಿ ಹೂಗುಚ್ಛ ಕೊಟ್ಟು ಹೋಗಿದ್ದರೆ, ನೀತಾ ಅಂಬಾನಿ ಕೇಂದ್ರದ ಎಲ್ಲ ಸಚಿವರಿಗೆ ಗುಜರಾತ್‌ನ ಜಾಮ್‌ ನಗರದ ಮಾವಿನ ಹಣ್ಣಿನ ಬುಟ್ಟಿ ಕಳಿಸಿದ್ದಾರಂತೆ. 

ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ

98ರಲ್ಲಿ ಅನಂತಕುಮಾರ್‌ ಕೇಂದ್ರದ ವಿಮಾನಯಾನ ಮಂತ್ರಿಯಾದ ಕೆಲವೇ ದಿನಗಳಲ್ಲಿ ಅವರ ತಂದೆ ತೀರಿಕೊಂಡಿದ್ದರು. ಆಗ ಬೆಂಗಳೂರಿನ ಮನೆಗೆ ಬಂದ ಈಗಿನ ನಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ಮಾಲೀಕ ನರೇಶ್‌ ಗೋಯಲ್‌ ಅವರನ್ನು ಅನಂತ್‌ ಒಮ್ಮೆಯೂ ಭೇಟಿಯಾಗಲಿಲ್ಲ. ಆಗ ನರೇಶ್‌ ಅವರು ನಾರಾಯಣ ಶಾಸ್ತ್ರಿ ನಿಧನದಿಂದ ತುಂಬಾ ನೋವಾಗಿದೆ ಎಂದು ಅಳಲು ಆರಂಭಿಸಿದರಂತೆ. ಕೊನೆಗೆ ವಯ್ಯಾಲಿಕಾವಲ್‌ ಸರ್ಕಲ್‌ನಲ್ಲಿ ಶಾಸ್ತ್ರಿಗಳ ಪುತ್ಥಳಿ ಇಡುತ್ತೇನೆ ಎಂದು ನರೇಶ್‌ ಹೇಳಿದಾಗ ಅನಂತ್‌ ಸ್ವಲ್ಪ ಕೋಪದಿಂದಲೇ ನೀವಿನ್ನು ಹೊರಡಿ ಎಂದರಂತೆ. ಕಲಾಕಾರರು ಎಲ್ಲ ಕಡೆಗೂ ಇರುತ್ತಾರೆ.

ಸುವರ್ಣ ನ್ಯೂಸ್ ದಿಲ್ಲಿ ಪ್ರತಿನಿಧಿ ಪ್ರಶಾಂತ್ ನಾತು ಅವರ ಕಾಲಂನಿಂದ