ಸಿಬಿಐ ಕೋರಿಕೆ ಮೇರೆಗೆ ತ್ಯಾಗಿ ಅವರನ್ನು ನಾಲ್ಕು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನವದೆಹಲಿ(ಡಿ.10): ವಿವಿಐಪಿ ಕಾಪ್ಟರ್ ಹಗರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿರುವ ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರನ್ನು ಪಟಿಯಾಲ ಹೌಸ್ ಮ್ಯಾಜಿಸ್ಟ್ರೀಯಲ್ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ.

₹ 3,600 ಕೋಟಿ ಆಗಸ್ಟಾವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಬಂಧಿತರಾಗಿರುವ ತ್ಯಾಗಿ ಮತ್ತು ಇತರರನ್ನು 10 ದಿನಗಳ ಮಟ್ಟಿಗೆ ತಮ್ಮ ವಶಕ್ಕೆ ಒಪ್ಪಿಸುವಂತೆ ಸಿಬಿಐ ಕೋರಿತ್ತು.

ತ್ಯಾಗಿ, ಅವರ ಸೋದರ ಸಂಬಂಧಿ ಸಂಜೀವ್ ಅಲಿಯಾಸ್ ಜೂಲಿ ತ್ಯಾಗಿ ಮತ್ತು ನ್ಯಾಯವಾದಿ ಗೌತಮ್ ಖೇತಾನ್‌ರನ್ನು ಶುಕ್ರವಾರ ಸಿಬಿಐ ಬಂಧಿಸಿದೆ. ಸಿಬಿಐ ಕೋರಿಕೆ ಮೇರೆಗೆ ತ್ಯಾಗಿ ಅವರನ್ನು ನಾಲ್ಕು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

‘‘ಎಸ್‌ಪಿ ತ್ಯಾಗಿ ಅಧಿಕಾರಾವಧಿಯಲ್ಲಿ ಅವರ ಕುಟುಂಬ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಿದೆ. ಈ ವಿಷಯದಲ್ಲಿ ಅವರನ್ನು ವಿಚಾರಣೆಗೊಳಪಡಿಸಬೇಕಾಗಿದೆ’’ ಎಂದು ಸಿಬಿಐ ತಿಳಿಸಿದೆ. ತ್ಯಾಗಿ ಸಹೋದರರು ಹಾಗೂ ಖೇತಾನ್‌ರನ್ನು ಶುಕ್ರವಾರ ಮುಂಜಾನೆ ವಿಚಾರಣೆಗೆಂದು ಕರೆಸಿಕೊಳ್ಳಲಾಗಿತ್ತು. ಮಧ್ಯಾಹ್ನ ನಂತರ ಅವರನ್ನು ಸಿಬಿಐ ಬಂಧಿಸಿತ್ತು.

ತ್ಯಾಗಿ ಸಹೋದರರು ಮತ್ತು ಖೇತಾನ್‌ರ ವಿದೇಶಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ಸಾಕ್ಷಿಯಿದೆ ಎಂದು ಸಿಬಿಐ ಪ್ರತಿಪಾದಿಸಿದೆ.