‘‘ವಿಜಯ ಮಲ್ಯ ಅವರ ದೊಡ್ಡ ಮೊತ್ತದ ಸಾಲವನ್ನೇ ಮನ್ನಾ ಮಾಡಲು ಸಾಧ್ಯವಾದರೆ ನನ್ನ ಸಾಲವನ್ನೇಕೆ ಮನ್ನಾ ಮಾಡಬಾರದು,’’

ಮುಂಬೈ(ನ.20): ಉದ್ಯಮಿ, ಮದ್ಯ ದೊರೆ ವಿಜಯ್ ಮಲ್ಯ ಸೇರಿದಂತೆ 63 ಮಂದಿ ಉದ್ದೇಶಪೂರ್ವಕ ಸುಸ್ತಿದಾರರ 7 ಸಾವಿರ ಕೋಟಿ ಸಾಲವನ್ನು ಸ್ಟೇಟ್ ಬ್ಯಾಂಕ್ ಆ್ ಇಂಡಿಯಾ ತಮ್ಮ ಲೆಕ್ಕದ ಪುಸ್ತಕದಿಂದ ಹೊರಗಿಟ್ಟು, ಮನ್ನಾ ಮಾಡಿದ್ದಾಯ್ತು. ಈಗ ನನ್ನದೂ ಸಾಲ ಮನ್ನ ಮಾಡಿ ಎಂದು ವ್ಯಕ್ತಿಯೊಬ್ಬರು ಅದೇ ಬ್ಯಾಂಕ್‌ಗೆ ಅರ್ಜಿ ಗುಜರಾಯಿಸಿದ್ದಾರೆ.

‘‘ವಿಜಯ ಮಲ್ಯ ಅವರ ದೊಡ್ಡ ಮೊತ್ತದ ಸಾಲವನ್ನೇ ಮನ್ನಾ ಮಾಡಲು ಸಾಧ್ಯವಾದರೆ ನನ್ನ ಸಾಲವನ್ನೇಕೆ ಮನ್ನಾ ಮಾಡಬಾರದು,’’ ಎಂದು ಪ್ರಶ್ನಿಸಿ ಮಹಾರಾಷ್ಟ್ರದ ನಾಸಿಕ್‌ನ ಪೌರ ಕಾರ್ಮಿಕರೊಬ್ಬರು ಎಸ್‌ಬಿಐನ ಶಾಖೆಯೊಂದಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗದ ಬ್ಯಾಂಕ್ ಅಕಾರಿಗಳು ಮುಗುಮ್ಮಾಗಿದ್ದಾರೆ.

ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಪೌರಸಭೆಯ ಸಾಯಿ ಕರ್ಮಚಾರಿ ಆಗಿರುವ ಭಾವುರಾವ್ ಸೋನವಾನೆ ಎಂಬವರೇ ಈ ರೀತಿ ಬ್ಯಾಂಕಿಗೆ ಪತ್ರ ಬರೆದಿರುವವರು. ಇವರು ತಮ್ಮ ಅನಾರೋಗ್ಯಪೀಡಿತ ಪುತ್ರನ ಚಿಕಿತ್ಸೆಗಾಗಿ ಎಸ್‌ಬಿಐನಿಂದ 1.5 ಲಕ್ಷ ವೈಯಕ್ತಿಕ ಸಾಲವನ್ನು ಪಡೆದುಕೊಂಡಿದ್ದರು. ಆದರೆ, ಅದನ್ನು ತೀರಿಸಲು ಬಹಳ ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಮಲ್ಯ ಅವರ ಸಾಲವನ್ನು ಮನ್ನಾ ಮಾಡಿ ಎಸ್‌ಬಿಐ ಘೋಷಣೆ ಹೊರಡಿಸಿದ ಬೆನ್ನಲ್ಲೇ ಭಾವುರಾವ್ ಅವರು ಬ್ಯಾಂಕಿಗೆ ಪತ್ರ ಬರೆದಿದ್ದಾರೆ.

‘‘ಮದ್ಯದ ದೊರೆ ವಿಜಯ್ ಮಲ್ಯ ಅವರ ಕೋಟಿಗಟ್ಟಲೆ(1,200 ಕೋಟಿ) ಸಾಲವನ್ನು ಮನ್ನಾ ಮಾಡಿದ ಬ್ಯಾಂಕ್‌ನ ಕ್ರಮವನ್ನು ನಾನು ಸ್ವಾಗತಿಸುತ್ತೇನೆ. ನಾನೂ ಕೂಡ ನನ್ನ ಪುತ್ರನ ಚಿಕಿತ್ಸೆಗಾಗಿ ನಿಮ್ಮ ಬ್ಯಾಂಕ್‌ನಿಂದ 1.5 ಲಕ್ಷ ವೈಯಕ್ತಿಕ ಸಾಲ ಪಡೆದಿದ್ದೇನೆ. ಮಲ್ಯರ ಸಾಲವನ್ನು ಮನ್ನಾ ಮಾಡುವ ನೀವು ನನ್ನ ಸಾಲವನ್ನೇಕೆ ಮನ್ನಾ ಮಾಡಬಾರದು?,’’ ಎಂದು ಪತ್ರದಲ್ಲಿ ಭಾವುರಾವ್ ಪ್ರಶ್ನಿಸಿದ್ದಾರೆ. ಜತೆಗೆ, ‘‘ಯಾವ ಆಧಾರದಲ್ಲಿ ವಿಜಯ್ ಮಲ್ಯ ಸಾಲ ಮನ್ನಾ ಮಾಡಲಾಗಿದೆಯೋ, ಅದೇ ರೀತಿ ನನ್ನ ಸಾಲವನ್ನೂ ಮನ್ನಾ ಮಾಡುವಂತೆ ಕೋರಿದ್ದೇನೆ,’’ ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಲ್ಯ ಅವರ ಸಾಲ ಮನ್ನಾ ಕುರಿತು ಪ್ರತಿಪಕ್ಷಗಳು ಪ್ರಶ್ನಿಸಿದಾಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ‘‘ಸಾಲ ಮನ್ನಾವನ್ನು ಅದರ ವಾಚ್ಯಾರ್ಥವನ್ನು ನೋಡಿ ನಿರ್ಧರಿಸಬೇಡಿ. ಸಾಲವನ್ನು ಮನ್ನಾ ಮಾಡಲಾಗಿಲ್ಲ. ಸಾಲ ಹಾಗೇ ಉಳಿದಿದೆ. ಅದನ್ನು ಮರುಪಾವತಿ ಮಾಡಿಸಲಾಗುತ್ತದೆ,’’ ಎಂದು ಸಚಿವ ಜೇಟ್ಲಿ ನುಡಿದಿದ್ದರು.