ನೈಜರೀಯ ಮೂಲದ ಆ್ಯಂಡ್ರೋ ಅಲಿಯಾಸ್‌ ಎರಿಕ್‌ ಪೀಟರ್‌ ಹಾಗೂ ಮಹಾರಾಷ್ಟ್ರದ ಥಾಣೆಯ ಬಬ್ಲಿ ಪರ್ವಿನ್‌ ಹಾಶ್ಮಿ ಬಂಧಿತರು. ಆರೋಪಿಗಳಿಂದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಆರೋಪಿಗಳು ಎಬೋಲಾ ಕಾಯಿಲೆಗೆ ಸೂಕ್ತ ಮದ್ದು ಎಂದು ನಕಲಿ ಔಷಧೀಯ ಬೀಜಗಳನ್ನು ನೀಡಿ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ವಿಜಯಾ ಅವರಿಗೆ ರೂ.50 ಲಕ್ಷ ವಂಚಿಸಿದ್ದರು.

ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮೂಲಕ ಪರಿಚಿತರಾದ ನೂ​ರಾರು ಜನರಿಗೆ ಗಿಡಮೂಲಿಕೆ ಔಷಧಿ ವ್ಯಾಪಾರದಲ್ಲಿ ಹಣ ಗಳಿಸಬಹುದು ಎಂದು ಆಸೆ ತೋರಿಸಿ .8 ಕೋಟಿ ಮೋಸ ಮಾಡಿದ್ದ ವಿದೇಶಿ ಪ್ರಜೆ ಸೇರಿ ಕಿಲಾಡಿ ಜೋಡಿ​ಯೊಂದು ತಲಘಟ್ಟಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.

ನೈಜರೀಯ ಮೂಲದ ಆ್ಯಂಡ್ರೋ ಅಲಿಯಾಸ್‌ ಎರಿಕ್‌ ಪೀಟರ್‌ ಹಾಗೂ ಮಹಾರಾಷ್ಟ್ರದ ಥಾಣೆಯ ಬಬ್ಲಿ ಪರ್ವಿನ್‌ ಹಾಶ್ಮಿ ಬಂಧಿತರು. ಆರೋಪಿಗಳಿಂದ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಆರೋಪಿಗಳು ಎಬೋಲಾ ಕಾಯಿಲೆಗೆ ಸೂಕ್ತ ಮದ್ದು ಎಂದು ನಕಲಿ ಔಷಧೀಯ ಬೀಜಗಳನ್ನು ನೀಡಿ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿ ವಿಜಯಾ ಅವರಿಗೆ ರೂ.50 ಲಕ್ಷ ವಂಚಿಸಿದ್ದರು.

ಹೇಗೆ ವಂಚನೆ?: ನೈಜೀರಿಯಾ ಮೂಲದ ಆ್ಯಂಡ್ರೋ, ಬಟ್ಟೆವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದ್ದ. ಹಲವು ದಿನಗಳ ಹಿಂದೆ ಮುಂಬೈ ಬಟ್ಟೆವ್ಯಾಪಾರಿ ಬಬ್ಲಿ ಸ್ನೇಹವಾಗಿದೆ. ಬಳಿಕ ಹಣದಾಸೆಗೆ ಬಿದ್ದ ಈ ಚಾಲಾಕಿ ಗೆಳೆಯರು ಗಿಡಮೂಲಿಕೆ ವ್ಯವಹಾರ ಮೂಲಕ ಜನರಿಗೆ ವಂಚಿಸುವ ಕೃತ್ಯಕ್ಕಿಳಿದಿದ್ದಾರೆ.

ಫೇಸ್‌ಬುಕ್‌ನಲ್ಲಿ ಆ್ಯಂಡ್ರೋ, ರಿಯಲ್‌ ಉದ್ಯಮಿ ‘ಎರಿಕ್‌ ಪೀಟರ್‌' ಎಂದು ಖಾತೆ ತೆರೆದಿದ್ದ. ತಾನೇ ಮುಂದಾಗಿ ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳು ಸೇರಿದಂತೆ ಶ್ರೀಮಂತರ ಜತೆ ಗೆಳತನ ಮಾಡುತ್ತಿದ್ದ. ಆ ಸ್ನೇಹಿತರಿಗೆ ಹಾವು ಕಡಿತ, ಎಬೋಲಾ ಕಾಯಿಲೆ ಸೇರಿದಂತೆ ಹಲವು ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸುವ ಔಷಧಿಗಳ ಮಾರಾಟ ಆರಂಭಿಸುವಂತೆ ಅವರು ಸಲಹೆ ನೀಡುತ್ತಿದ್ದ. ಅಲ್ಲದೆ ಈ ವ್ಯವಹಾರವು ಕಡಿಮೆ ಬಂಡವಾಳ ಹೂಡಿ, ದುಪ್ಪಟ್ಟು ಹಣ ಸಂಪಾದಿಸುವ ವ್ಯವಹಾರವಾಗಿದೆ ಎಂದು ಆರೋಪಿಗಳು ಆಮಿಷವೊಡುತ್ತಿದ್ದರು.

ಅಲ್ಲದೆ ವಿದೇಶದಲ್ಲಿ ಬೇಡಿಕೆ ಹೊಂದಿರುವ ಗಿಡಮೂಲಿಕೆ ಔಷಧಿಗಳಿಗೆ ತಾವು ಮಾರುಕಟ್ಟೆಕಲ್ಪಿಸಿಕೊಡುವುದಾಗಿ ಸಹ ಹೇಳಿದ್ದರು. ಈ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಗೆಳಯರಿಂದ ಹಣ ಪಡೆದು ನಕಲಿ ಗಿಡ ಮೂಲಿಕೆ ಔಷಧ ಪೂರೈಸಿ ವಂಚಿಸುತ್ತಿದ್ದರು. ಹೀಗೆ ಈ ಮೋಸದ ಜಾಲಕ್ಕೆ ಬಿದ್ದು ಸುಮಾರು 101 ಮಂದಿ ರೂ.8 ಕೋಟಿ ಕಳೆದು ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ 2016ರ ಆಗಸ್ಟ್‌ನಲ್ಲಿ ಪೀಟರ್‌ಗೆ ಕನಕಪುರ ರಸ್ತೆಯ ಆವಲಹಳ್ಳಿ ಎಚ್‌ಎಂ ವಲ್ಡ್‌ರ್‍ ಸಿಟಿ ನಿವಾಸಿ ಸಾಫ್ಟ್‌ವೇರ್‌ ಎಂಜಿನಿಯರ್‌ ವಿಜಯಾ ಅವರ ಪರಿಚಯವಾಗಿದೆ. ಆಗ ಅವರಿಗೆ ಔಷಧ ಬ್ಯುಸಿನೆಸ್‌ ಬಗ್ಗೆ ಆಫರ್‌ ನೀಡಿದ್ದ. ಈ ಮಾತಿಗೆ ಮರುಳಾದ ವಿಜಯಾ ಅವರಿಗೆ ಹರಿಯಾಣ ರಾಜ್ಯದ ಗುರುಗ್ರಾಮದಲ್ಲಿರುವ ರವೀಂದರ್‌ ಎಂಬುವರಿಂದ ಒಂದು ಪ್ಯಾಕೆಟ್‌ ಹರ್ಬಲ್‌ ಸೀಡ್ಸ್‌ಗಳನ್ನು ರೂ.40 ಸಾವಿರಕ್ಕೆ ಖರೀದಿ ಮಾಡಿ, ಬಳಿಕ ನಾವು ಸೂಚಿಸುವ ಕಂಪನಿಗಳಿಗೆ ಮಾರಿದರೆ ನಿಮಗೆ ಅಮೆರಿಕ ಡಾಲರ್‌ನಲ್ಲಿ ದುಪ್ಪಟ್ಟು ಲಾಭ ಸಿಗಲಿದೆ ಎಂದು ಆ್ಯಂಡ್ರೋ ಆಮಿಷವೊಡಿದ್ದ. ಇದಕ್ಕೆ ಸಮ್ಮತಿಸಿದ ವಿಜಯಾ ಅವರು, ರವೀಂದರ್‌ನಿಂದ ರೂ.50 ಲಕ್ಷಕ್ಕೆ 100 ಪ್ಯಾಕೆಟ್‌ ಅಂಜಿಲಾಕ ಹರ್ಬಲ್‌ ಬೀಜಗಳನ್ನು ಕೊಂಡಿದ್ದರು. ಬಳಿಕ ಮೋಸ ಹೋಗಿರುವ ಸಂಗತಿ ಅರಿವಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ದೂರಿನ ಬಗ್ಗೆ ತನಿಖೆ ಕೈಗೆತ್ತಿಕೊಂಡ ತಲಘಟ್ಟಪುರ ಠಾಣೆ ಪೊಲೀಸರು, ವಿಜಯಾ ಅವರಿಂದಲೇ ಪೀಟರ್‌ಗೆ ಔಷಧೀಯ ಬೀಜ ಖರೀದಿಸುವ ಸಲುವಾಗಿ ಕರೆ ಮಾಡಿಸಿದ್ದರು. ಈ ಮಾತಿಗೆ ಒಪ್ಪಿದ ಆತ, ಬೀಜ ಮಾರಾಟಕ್ಕೆ ಬಂದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವೀಸಾ ದುರ್ಬಳಕೆ: ಆರು ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ಆಂಡ್ರೋ, ಪ್ರವಾಸ ಹಾಗೂ ಬ್ಯುಸೆನೆಸ್‌ ವೀಸಾ ದುರ್ಬಳಕೆ ಮಾಡಿಕೊಂಡಿದ್ದಾನೆ. ಅಲ್ಲದೆ ಆತ ಕಾಂಗೋ ಪ್ರಜೆ ಹೆಸರಿನಲ್ಲಿ ವೀಸಾ ಪಡೆದಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.