ಮಂಡ್ಯದ ತೋಟಗಾರಿಕೆ ಕಚೇರಿವರೆಗೂ ಪಾದಯಾತ್ರೆಯಲ್ಲಿ ಜೊತೆ ನೀಡಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೈಸೂರು(ಆ.16): ದೇಶ‌ ಮತ್ತು ಕರ್ನಾಟಕ ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯುವ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಕನಿಷ್ಠ 1 ಸಾವಿರ ಮಾಶಾಸನ ಕೊಡಿಸುವ ಸಲುವಾಗಿ ವಿದೇಶಿ ಪ್ರಜೆಯೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ.

ಡೆವೀಡ್ ಅತ್ತೋವೆ(27) ಎಂಬ ಬ್ರಿಟಿಷ್ ಯುವಕ ಕನ್ಯಾಕುಮಾರಿಯಿಂದ ಪಾದಯಾತ್ರೆ ಆರಂಭಿಸಿ ಇಂದು ರಾಜ್ಯದಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಮಂಡ್ಯ ಜಿಲ್ಲೆಗೆ ಪಾದಯಾತ್ರೆಯ ಮೂಲಕ ಆಗಮಿಸಿದ್ದಾನೆ. ಮೈಸೂರು ಮೂಲಕ ಮಂಡ್ಯ ಪ್ರವೇಶಿಸಿದ ಈ ಯುವಕನನ್ನು ಮಂಡ್ಯದ ಜನರಕ್ಷಕ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಕೃಷ್ಣೇಗೌಡ ಮತ್ತು ಹಲವು ರೈತರು ಜಿಲ್ಲೆಯ ಗಡಿ ಭಾಗ ಇಂಡುವಾಳು ಬಳಿ ಸ್ವಾಗತಿಸಿದರು.

ಅಲ್ಲಿಂದ ಮಂಡ್ಯದ ತೋಟಗಾರಿಕೆ ಕಚೇರಿವರೆಗೂ ಪಾದಯಾತ್ರೆಯಲ್ಲಿ ಜೊತೆ ನೀಡಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಕೆಲಕಾಲ ಸಮಾಲೋಚನೆ ನಡೆಸಿ ಮಂಡ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ವೇಳೆ ಮಾತನಾಡಿದ ಡೆವೀಡ್ ಅತ್ತೋವೆ, ಭಾರತದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸರ್ಕಾರ ರೈತರ ಪರವಾಗಿ ನಿಲ್ಲುತ್ತಿಲ್ಲ. ರೈತರ ಆತ್ಮಹತ್ಯೆ ತಡೆಗೆ ಸರ್ಕಾರಗಳ ಗಮನ ಸೆಳೆಯುವ ಕಾರಣದಿಂದಾಗಿ ತಾನು ಕನ್ಯಾಕುಮಾರಿಯಿಂದ ಪಂಜಾಬ್'ವರೆಗೂ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು.