ಹುಬ್ಬಳ್ಳಿ

ಗೋವಾದ ಹಿತರಕ್ಷಣೆಯನ್ನು ಕಾಯ್ದುಕೊಳ್ಳುವ ಭರದಲ್ಲಿ ಮುಖ್ಯಮಂತ್ರಿ ಮನೋಹರ್‌ ಪರ್ರಿಕರ್‌ ಕನ್ನಡಿಗರ ವಿರೋಧ ಕಟ್ಟಿಕೊಂಡಿದ್ದರು. ಸರಳ, ಸಜ್ಜನ ರಕ್ಷಣಾ ಸಚಿವನಾಗಿ ಕನ್ನಡಿಗರ ಹೃದಯ ಗೆದ್ದಿದ್ದರೂ ಕರ್ನಾಟಕಕ್ಕೆ ಮಹಾದಾಯಿ ನೀರು ಕೊಡುವ ವಿಚಾರವನ್ನು ನ್ಯಾಯಾಧಿಕರಣದ ವರೆಗೆ ಕೊಂಡೊಯ್ದದ್ದು, ಗೋವಾದ ಬೈನಾದಲ್ಲಿ ನೆಲೆಸಿದ್ದ ಕನ್ನಡಿಗರ ಒಕ್ಕಲೆಬ್ಬಿಸುವ ವಿಚಾರವಾಗಿ ಕಠಿಣವಾಗಿ ನಡೆದುಕೊಂಡದ್ದು ಹಾಗೂ ಫಾರ್ಮಾಲಿನ್‌ ವಿವಾದವನ್ನು ಮುಂದಿಟ್ಟುಕೊಂಡೇ ಕರ್ನಾಟಕದ ಮೀನಿನ ಮೇಲೆ ನಿರ್ಬಂಧ ವಿಧಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಇಂಥ ನಿಯಮಗಳೇ ಅವರಿಗೆ ಗೋವಾದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಟ್ಟಿತ್ತು ಎನ್ನುವುದು ಸುಳ್ಳಲ್ಲ.

ಕರ್ನಾಟಕದ ಮೀನುಗಳಿಗೆ ನಿರ್ಬಂಧ: ಮೀನುಗಳು ವಾರದ ಕಾಲ ಕೆಡದಂತೆ ಹೊರ ರಾಜ್ಯದ ಮೀನುಗಳ ಮೇಲೆ ಫಾರ್ಮಾಲಿನ್‌ ಸಿಂಪಡಿಸಲಾಗುತ್ತದೆ ಎಂಬ ಮಾಹಿತಿ ಸಿಗುತ್ತಿದ್ದಂತೆ ಪರ್ರಿಕರ್‌ ಸರ್ಕಾರ ತಕ್ಷಣ ಹೊರ ರಾಜ್ಯಗಳಿಂದ ಗೋವಾಕ್ಕೆ ಬರುವ ಎಲ್ಲ ಮೀನಿನ ಮೇಲೆ ನಿರ್ಬಂಧ ವಿಧಿಸಿತು. ಈ ನಿರ್ಬಂಧದಿಂದ ದೊಡ್ಡ ಏಟು ತಿಂದಿದ್ದು ಮಾತ್ರ ಕರ್ನಾಟಕದ ಮೀನುಗಾರರು. ಗೋವಾದ ಜನತೆಯ ಆರೋಗ್ಯ ನಮಗೆ ಮುಖ್ಯ. ಆರೋಗ್ಯಕ್ಕೆ ಹಾನಿಕರವಾದ ಮೀನು ನಮ್ಮ ರಾಜ್ಯಕ್ಕೆ ಬೇಡ ಎನ್ನುವುದು ಮುಖ್ಯಮಂತ್ರಿ ಪರ್ರಿಕರ್‌ ನಿಲುವಾಗಿತ್ತು.

ಮಂಗಳೂರಿನಿಂದ ಕಾರವಾರ ತನಕದ ಬಿಜೆಪಿ ಸಂಸದರು, ಶಾಸಕರ ನಿಯೋಗ ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕರ್ನಾಟಕದ ಮೀನು ಲಾರಿಗಳಿಗೆ ಪ್ರವೇಶ ನೀಡುವಂತೆ ವಿನಂತಿಸಿದರೂ ಪರ್ರಿಕರ್‌ ಕ್ಯಾರೇ ಅನ್ನ್ನಲಿಲ್ಲ. ಕರ್ನಾಟಕದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ದೂರವಾಣಿ ಕರೆ ಮಾಡಿದರೂ ಆರೋಗ್ಯ ಸಚಿವರು ತಲೆ ಕೆಡಿಸಿಕೊಳ್ಳಲಿಲ್ಲ. ನಿಮ್ಮ ಮೀನಿಗಿಂತ ನಮ್ಮವರ ಆರೋಗ್ಯ ದೊಡ್ಡದು ಎಂಬ ನಿಲುವಿಗೆ ಅಂಟಿಕೊಂಡಿದ್ದರು ಮುಖ್ಯಮಂತ್ರಿ.

ಮಹದಾಯಿ ನೀರಿಗೆ ಬಂಡೆ: ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಪರಸ್ಪರ ಮಾತುಕತೆಗೆ ಮನೋಹರ್‌ ಪರ್ರಿಕರ್‌ ಒಪ್ಪಿದ್ದರೆ ಮಹದಾಯಿ ಸಮಸ್ಯೆ ದಶಕದ ಹಿಂದೆಯೇ ಪರಿಹಾರವಾಗುತ್ತಿತ್ತು. ಆದರೆ, ಪರ್ರಿಕರ್‌ ಕಠಿಣ ನಿಲುವಿನಿಂದಾಗಿ ಈ ವಿವಾದದ ಕುರಿತು 12 ವರ್ಷ ವಿಳಂಬವಾಗಿ ನ್ಯಾಯಾಧೀಕರಣದ ಮೂಲಕ ತೀರ್ಪು ಬಂದಿದೆ. ಮಹದಾಯಿ ವಿಷಯದಲ್ಲಿ ಗೋವಾದಲ್ಲಿನ ಎಲ್ಲ ರಾಜಕೀಯ ಪಕ್ಷಗಳ ನಿಲುವು ಒಂದೇ. ಅಲ್ಲಿನ ಪರಿಸರವಾದಿಗಳು ಹೇಳಿದ್ದೇ ಅವರಿಗೆ ವೇದವಾಕ್ಯ. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು.

ಪರ್ರಿಕರ್‌ ಅವರಂತು ಒಂದು ಹೆಜ್ಜೆ ಮುಂದುಹೋಗಿ ‘ಮಹದಾಯಿ ನದಿಯಲ್ಲಿನ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ’ ಎಂದು ಸಾರಿದ್ದರು. ಈ ವಿವಾದ ನ್ಯಾಯಾಧಿಕರಣದ ಮುಂದೆ ಹೋಗಿ ಮಹಾದಾಯಿ ವ್ಯಾಪ್ತಿಯ ರಾಜ್ಯಗಳು ‘ಪರಸ್ಪರ ಮಾತುಕತೆ ಮಾಡಿ’ ಎನ್ನುವ ನಿರ್ದೇಶನ ನೀಡಿದರೂ ಸಮಸ್ಯೆ ಪರಿಹಾರವಾಗದಿರಲು ಪರ್ರಿಕರ್‌ ವರ ನಿಲುವೇ ಕಾರಣ.

ಬೈನಾ ಕನ್ನಡಿಗರನ್ನು ಒಕ್ಕಲೆಬ್ಬಿಸಿದ್ದರು

ಅದು 2004 ಜುಲೈ 14ರ ಮಧ್ಯರಾತ್ರಿ ಮಹಿಳೆಯರು, ಮಕ್ಕಳು ವೃದ್ಧರೆನ್ನದೆ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಬೈನಾಬೀಚಿನಲ್ಲಿ ಬದುಕು ಕಟ್ಟಿಕೊಂಡಿದ್ದ ಕನ್ನಡಿಗರ 1242 ಗುಡಿಸಲುಗಳನ್ನು ಧ್ವಂಸ ಮಾಡಿದ್ದೂ ಪರ್ರಿಕರ್‌ ಸರ್ಕಾರ. ಜೀವ ಉಳಿದರೆ ಸಾಕು ಎಂದು ಉಟ್ಟಬಟ್ಟೆಯಲ್ಲೇ ಹೊರಗೋಡಿ ಬಂದವರಿಗೆ ಉಡಲು ಬೇರೆ ಬಟ್ಟೆ, ಹೊದೆಯಲು ಹೊದಿಕೆ, ಉಣ್ಣಲು ತುತ್ತು ಅನ್ನವೂ ಇರಲಿಲ್ಲ. ಕೈಯಲ್ಲೂ ಬಿಡಿಗಾಸಿಲ್ಲ. ಕಣ್ಣಿಗೆ ಕಂಡ ಉಳ್ಳವರ ಮನೆ, ಚರ್ಚ್, ಮಸೀದಿಗಳ ಕಂಪೌಂಡ್‌ ಗೋಡೆಗಳನ್ನು ಆಶ್ರಯಿಸಿ ಸುರಿಯುವ ಮಳೆಯಲ್ಲೇ ಮಕ್ಕಳನ್ನು ಅಪ್ಪಿಕೊಂಡು ನೆನೆಯುತ್ತ ರಾತ್ರಿ ಕಳೆದರು.

ಸತತ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುತ್ತಿದ್ದ ಉತ್ತರ ವಾಸ್ಕೋ ಕ್ಷೇತ್ರದ ಮತಗಳನ್ನು ಧ್ವಂಸ ಮಾಡಿ ಅಲ್ಲಿ ಬಿಜೆಪಿ ಕಮಲ ಅರಳಿಸುವ ರಾಜಕೀಯ ಹಪಾಹಪಿಯಲ್ಲಿ ಅಮಾಯಕ ಬಡವರನ್ನು ನಿರ್ದಯವಾಗಿ ಒಕ್ಕಲೆಬ್ಬಿಸಿದ ಪರ್ರಿಕರ್‌ ಇಂದಿಗೂ ಅಲ್ಲಿನ ಕನ್ನಡಿಗರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ.