ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮಹಿಳಾ ಪೊಲೀಸ್ ಪೇದೆಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಅಲ್ಲದೇ, ಕವಾಯಿತು ಮುಖ್ಯ ಸಮಾದೇಶಕರಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಶಸ್ತ್ರ ಪೊಲೀಸ್ ನಿರೀಕ್ಷಕ ಎಸ್.ಎನ್.ಕಿರಣಕುಮಾರ್ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ಗೌರವ ರಕ್ಷಣೆ ಆದೇಶ ನೀಡಿದರು.
ಚನ್ನಗಿರಿ(ನ.19): ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಗೆ ಮಹಿಳಾ ಪೊಲೀಸ್ ಪೇದೆಗಳಿಂದ ಗೌರವ ರಕ್ಷೆ ನೀಡುವ ಜೊತೆಗೆ ಕವಾಯಿತು ಮುಖ್ಯ ಸಮಾದೇಶಕರು ಎಲ್ಲಾ ಆದೇಶಗಳನ್ನೂ ಕನ್ನಡದಲ್ಲೇ ನೀಡಿ ಹೊಸ ಪರಂಪರೆಗೆ ಮುನ್ನುಡಿ ಬರೆದ ಘಟನೆ ಚನ್ನಗಿರಿಯಲ್ಲಿ ಶನಿವಾರ ನಡೆಯಿತು.
ಪಟ್ಟಣದ ಹೆಲಿಪ್ಯಾಡ್'ಗೆ ಶನಿವಾರ ಮಧ್ಯಾಹ್ನ ಹೆಲಿಕಾಪ್ಟರ್'ನಲ್ಲಿ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮೊದಲ ಬಾರಿಗೆ ಮಹಿಳಾ ಪೊಲೀಸ್ ಪೇದೆಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಅಲ್ಲದೇ, ಕವಾಯಿತು ಮುಖ್ಯ ಸಮಾದೇಶಕರಾದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಶಸ್ತ್ರ ಪೊಲೀಸ್ ನಿರೀಕ್ಷಕ ಎಸ್.ಎನ್.ಕಿರಣಕುಮಾರ್ ಪೂರ್ಣ ಪ್ರಮಾಣದಲ್ಲಿ ಕನ್ನಡದಲ್ಲಿ ಗೌರವ ರಕ್ಷಣೆ ಆದೇಶ ನೀಡಿದರಲ್ಲದೇ, ಮುಖ್ಯ ಅತಿಥಿ (ಮುಖ್ಯಮಂತ್ರಿ)ಗಳಿಂದ ಅನುಮತಿಯನ್ನೂ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಕೇಳಿದ್ದು,ಗೌರವ ರಕ್ಷೆಯನ್ನೂ ಕನ್ನಡದಲ್ಲೇ ನೀಡಿದ್ದು ಸ್ವತಃ ಸಿಎಂ ಸಿದ್ದರಾಮಯ್ಯ ಮುಖದಲ್ಲಿ ಮಂದಹಾಸ ಮೂಡಿಸಿತು. ನಂತರ ಮುಖ್ಯಮಂತ್ರಿಗಳು ಪೂರ್ವ ವಲಯ ಐಜಿಪಿ ಡಾ.ಎಂ.ಎ.ಸಲೀಂ,ಎಸ್ಪಿ ಡಾ.ಭೀಮಾಶಂಕರ್ ಎಸ್.ಗುಳೇದ್ ಬಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೀಗಷ್ಟೇ ಪೊಲೀಸ್ ತರಬೇತಿ ಮುಗಿಸಿರುವ 21 ಮಹಿಳಾ ಪೊಲೀಸ್ ಪೇದೆಗಳು ಮುಖ್ಯಮಂತ್ರಿಗಳಿಗೆ ಗೌರವ ರಕ್ಷೆ ನೀಡುವ ಮೂಲಕ ಇತಿಹಾಸದ ಪುಟಗಳಲ್ಲಿ ಕವಾಯಿತು ಮುಖ್ಯ ಸಮಾದೇಶಕರ ಜೊತೆಗೆ ಚಿರಸ್ಥಾಯಿಯಾಗಿ ಉಳಿಯುವಂತಹ ಮೈಲುಗಲ್ಲಿಗೆ ಸಾಕ್ಷಿಯಾದರು. ಜಿಲ್ಲಾ ಪೊಲೀಸ್ ವರಿಷ್ಠ ಡಾ.ಭೀಮಾಶಂಕರ ಎಸ್.ಗುಳೇದ್ ಮಹಿಳೆಯರಿಗೂ ಸಮಾನತೆ ಕಲ್ಪಿಸಲು, ಗೌರವ ರಕ್ಷೆ ನೀಡಲೆಂಬ ಸದುದ್ದೇಶದಿಂದ ಮಹಿಳಾ ಪೊಲೀಸ್ ಪೇದೆಗಳಿಂದ ಗೌರವ ರಕ್ಷೆ ನೀಡಲು ಸೂಚನೆ ನೀಡಿದ್ದರು.
ಸಶಸ್ತ್ರ ಪೊಲೀಸ್ ನಿರೀಕ್ಷಕ ಎಸ್.ಎನ್.ಕಿರಣಕುಮಾರ್ ಕಳೆದ 4 ದಿನದಿಂದಲೂ 21 ಜನ ಮಹಿಳಾ ಪೇದೆಗಳಿಗೆ ಗೌರವ ರಕ್ಷೆ ಬಗ್ಗೆ, ಕನ್ನಡದಲ್ಲಿ ಕವಾಯಿತು ಆದೇಶ ನೀಡುವ ಕುರಿತಂತೆ ತರಬೇತಿ, ಮಾರ್ಗದರ್ಶನ ನೀಡಿದ್ದರು. ಈ ಎಲ್ಲಾ ಮಹಿಳಾ ಪೇದೆಗಳು ಈಚೆಗಷ್ಟೇ ತರಬೇತಿ ಮುಗಿಸಿದ್ದು, ಠಾಣೆಗಳಿಗೆ ಕರ್ತವ್ಯ ಹಂಚಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.
ಸದ್ಯಕ್ಕೆ ಡಿಆರ್'ನಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ಸಮಾರಂಭದ ಕವಾಯಿತಿನಲ್ಲಿ ಕನ್ನಡದಲ್ಲೇ ಕಮಾಂಡ್ ನೀಡಿದ್ದ ಸಶಸ್ತ್ರ ಪೊಲೀಸ್ ನಿರೀಕ್ಷಕ ಎಸ್.ಎನ್.ಕಿರಣಕುಮಾರ್ ನಂತರದಲ್ಲಿ ಎಸ್ಪಿ ಸಲಹೆ, ಸೂಚನೆ ಮೇರೆಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸಮಾರಂಭದಲ್ಲೂ ಕನ್ನಡದಲ್ಲೇ ಕವಾಯಿತು ಆದೇಶ ನೀಡಲು ಕ್ರಮ ಕೈಗೊಂಡಿದ್ದಾರೆ. ಇನ್ನು ಮುಂದೆ ಕವಾಯಿತು ಆದೇಶ, ಗೌರವ ರಕ್ಷೆ ಎಲ್ಲವನ್ನೂ ಕನ್ನಡದಲ್ಲೇ ನೀಡಲು ಸಶಸ್ತ್ರ ಮೀಸಲು ಪಡೆಯೂ ಉದ್ದೇಶಿಸಿದೆ.
