Asianet Suvarna News Asianet Suvarna News

10 ಕೋಟಿ ಕೊಟ್ಟರೆ ಗ್ರಾಮಕ್ಕೆ ದಾನಿ ಹೆಸರು : BSY

ಒಂದು ವೇಳೆ 10 ಕೋಟಿಗೂ ಅಧಿಕ ಹಣವನ್ನು ದಾನಿಗಳು ದಾನ ನೀಡಿದಲ್ಲಿ ಅಂತಹ ಹಳ್ಳಿಗೆ ದಾನಿಗಳ ಹೆಸರನ್ನೇ ಇಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. 

Flood hit village to be renamed after donors if 10 cr donated
Author
Bengaluru, First Published Aug 15, 2019, 11:10 AM IST

ಬೆಂಗಳೂರು [ಆ.15]:  ನೆರೆ ಪೀಡಿತ ಗ್ರಾಮಗಳ ಪುನಶ್ಚೇತನಕ್ಕೆ 10 ಕೋಟಿ ರು.ಗಿಂತ ಹೆಚ್ಚು ದೇಣಿಗೆ ನೀಡುವ ಸಂಸ್ಥೆಗಳ ಹೆಸರನ್ನು ಪುನಶ್ಚೇತನಗೊಳ್ಳುವ ಗ್ರಾಮಗಳಿಗೆ ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಉದ್ದಿಮೆದಾರರೊಂದಿಗೆ ಸಭೆ ನಡೆಸಿ ನೆರೆ ಪೀಡಿತ ಪ್ರದೇಶಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು. ಕಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅವರ ನೆರವಿಗೆ ಎಲ್ಲಾ ಕೈಗಾರಿಕೋದ್ಯಮಿಗಳು ನಿಂತು ಉದಾತ್ತವಾಗಿ ದೇಣಿಗೆ ನೀಡಬೇಕು ಎಂದು ಕೋರಿದರು. ಸರ್ಕಾರದ ಕರೆಗೆ ಮನ್ನಣೆ ನೀಡಿ 60ಕ್ಕೂ ಹೆಚ್ಚು ಕಂಪನಿ ಮುಖ್ಯಸ್ಥರು ಆಗಮಿಸಿ ನೆರವು ನೀಡುವ ಆಶ್ವಾಸನೆ ನೀಡಿದರು.

ರಾಜ್ಯದಲ್ಲಿ ಭಾರೀ ಮಳೆಯಿಂದ ಮತ್ತು ಪ್ರವಾಹದಿಂದ ಜನರು ತತ್ತರಿಸಿದ್ದಾರೆ. 80 ತಾಲೂಕುಗಳನ್ನು ನೆರೆಪೀಡಿತ ಎಂದು ಘೋಷಿಸಲಾಗಿದೆ. ಮಹಾರಾಷ್ಟ್ರ, ಕೇರಳ, ಕರ್ನಾಟಕದಲ್ಲಿ ಮಳೆಯಿಂದ ಭೂಕುಸಿತ ಸಂಭವಿಸಿದೆ. ಹಳ್ಳಿ, ಪಟ್ಟಣ ಜಲಾವೃತವಾಗಿದೆ. ಸೇತುವೆ ಮುಳುಗಿ, ರಸ್ತೆ ಹಾಳಾಗಿದೆ. ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಈವರೆಗೆ 6.97 ಲಕ್ಷ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. 1160 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 56 ಸಾವಿರ ಮನೆಗಳು ವಾಸಕ್ಕೆ ಯೋಗ್ಯವಿಲ್ಲ ಎಂದು ಘೋಷಿಸಿದ್ದೇವೆ. ರಕ್ಷಣೆ ಕಾರ್ಯ ಭರದಿಂದ ಸಾಗಿದೆ. ಕಳೆದ ಎರಡು ದಿನಗಳಿಂದ ಮಳೆ ಹತೋಟಿಗೆ ಬಂದಿದ್ದು, ಇನ್ನೂ ಸಂಪೂರ್ಣ ಚಿತ್ರಣ, ನಷ್ಟತಿಳಿಯಲು ಕೆಲವು ದಿನ ಬೇಕಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

200 ಗ್ರಾಮಗಳನ್ನು ಸ್ಥಳಾಂತರಿಸುವ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಉದ್ದಿಮೆದಾರರು ಸಹಾಯ ಹಸ್ತ ಚಾಚಬೇಕು. ಉದಾರ ಮನಸ್ಸಿನಿಂದ ದೇಣಿಗೆ ನೀಡಬೇಕು. 10 ಕೋಟಿ ರು.ಗಿಂತ ಹೆಚ್ಚು ನೆರವು ನೀಡಿದ ಗ್ರಾಮಕ್ಕೆ ನಿಮ್ಮ ಸಂಸ್ಥೆಯ ಹೆಸರನ್ನಿಡಲು ತೀರ್ಮಾನಿಸಲಾಗಿದೆ. ಆ ಗ್ರಾಮವನ್ನು ಹಣ ನೀಡುವ ಸಂಸ್ಥೆ ದತ್ತು ಪಡೆದುಕೊಂಡಂತೆ ಬಿಂಬಿಸಲಾಗುವುದು. ಬಟ್ಟೆ, ಆಹಾರ ಧಾನ್ಯ ಇತರೆ ಮೂಲಸೌಕರ್ಯ ಒದಗಿಸಿಕೊಡುವ ಬದಲು ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರೆ ಸಂತ್ರಸ್ತರಿಗೆ ಹೆಚ್ಚು ನೆರವಾಗಲಿದೆ ಎಂದರು.

ಕೈಗಾರಿಕೋದ್ಯಮಿಗಳೊಂದಿಗೆ ಸರ್ಕಾರವು ಇದ್ದು, ಯಾವುದೇ ಸಹಕಾರ ಬಯಸಿದರೂ ಅದನ್ನು ಕೊಡಲು ಸಿದ್ಧ. ಸಂಸ್ಥೆ ಉದ್ಯಮ ನಡೆಸಲು ಬೇಕಾದ ಮೂಲಸೌಕರ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದಿಂದ ಯಾವುದೇ ತೊಡಕಾಗುವುದಿಲ್ಲ. ಒಂದು ವೇಳೆ ಅನಗತ್ಯ ಸಮಸ್ಯೆಗಳಾದರೆ ನನ್ನ ಗಮನಕ್ಕೆ ತರಬಹುದು ಎಂದು ಆಶ್ವಾಸನೆ ನೀಡಿದರು.

ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜಲ್‌ ಕೃಷ್ಣ ಉಪಸ್ಥಿತರಿದ್ದರು.

Follow Us:
Download App:
  • android
  • ios