ನವದೆಹಲಿ[ಮೇ.23]: ಭಾರತೀಯ ವಾಯುಪಡೆಯ ಪೈಲಟ್‌ ಭಾವನಾ ಕಾಂತ್‌, ಯುದ್ಧ ವಿಮಾನಗಳನ್ನು ಹಾರಿಸಲು ಅರ್ಹತೆ ಪಡೆದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಿಗ್‌- 21 ಬಿಸನ್‌ ಯುದ್ಧ ವಿಮಾನವನ್ನು ಹಗಲಿನ ವೇಳೆಯಲ್ಲಿ ಹಾರಿಸುವ ಕಾರ್ಯಾಚರಣೆ ಪಠ್ಯವನ್ನು ಭಾವನಾ ಕಾಂತ್‌ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಹಲಗಲಿನ ವೇಳೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸಲು ಅರ್ಹತೆ ಗಿಟ್ಟಿಸಿದ ಮೊದಲ ಮಹಿಳಾ ಪೈಲಟ್‌ ಎನಿಸಿಕೊಂಡಿದ್ದಾರೆ.

ಸದ್ಯ ಭಾವನಾ ಅವರು ಬಿಕಾನೇರ್‌ನ ನಾಲ್‌ ವಾಯು ನೆಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತರಬೇತಿ ಪೂರ್ಣಗೊಂಡ ಬಳಿಕ ರಾತ್ರಿ ವೇಳೆಯಲ್ಲೂ ಯುದ್ಧ ವಿಮಾನ ಕಾರ್ಯಾಚರಣೆ ಕೈಗೊಳ್ಳಲು ಅನುಮತಿ ಪಡೆದುಕೊಳ್ಳಲಿದ್ದಾರೆ. ಭಾವನಾ ಕಾಂತ್‌ 2017ರ ನವೆಂಬರ್‌ನಲ್ಲಿ ವಾಯು ಪಡೆಯ ಯುದ್ಧ ವಿಮಾನ ಸ್ಕಾ$್ವರ್ಡನ್‌ಗೆ ಸೇರ್ಪಡೆಯಾಗಿದ್ದರು. ಕಳೆದ ವರ್ಷ ಮಾಚ್‌ರ್‍ನಲ್ಲಿ ಮಿಗ್‌- 21 ಬಿಸನ್‌ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಮೊದಲ ಮಹಿಳಾ ಪೈಲಟ್‌ ಎನಿಸಿಕೊಂಡಿದ್ದರು.

ಭಾವನಾ ಕಾಂತ್‌, ಅವನಿ ಚತುರ್ವೇದಿ ಮತ್ತು ಮೋಹನಾ ಸಿಂಗ್‌ ಅವರನ್ನು 2016ರ ಜುಲೈನಲ್ಲಿ ವಾಯುಪಡೆಯ ವೈಮಾನಿಕ ಅಧಿಕಾರಿಗಳನ್ನಾಗಿ ನೇಮಕಗೊಂಡಿದ್ದರು. ಇದಾದ ಒಂದು ವರ್ಷದ ಒಳಗಾಗಿ ಸರ್ಕಾರ ಮಹಿಳಾ ಪೈಲಟ್‌ಗಳಿಗೂ ಪ್ರಾಯೋಗಿಕವಾಗಿ ಯುದ್ಧ ವಿಮಾನ ಹಾರಾಟ ತರಬೇತಿ ನೀಡಲು ನಿರ್ಧರಿಸಿತ್ತು.