ನವದೆಹಲಿ[ಜ.14]: ಭಾರತ ವಿಭಜನೆಯಾಗಿ ಪಾಕಿಸ್ತಾನ ಉದಯವಾಗಿದ್ದಕ್ಕೆ ಮೊಹಮ್ಮದ್ ಆಲಿ ಜಿನ್ನಾ ಕಾರಣ ಎಂದು ಇತಿಹಾಸ ಹೇಳುತ್ತದೆ. ಆದರೆ, ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಡಾ. ಶಕೀಲ್ ಅಹಮದ್ ಪ್ರಕಾರ, ಇದಕ್ಕೆ ಮೀನು ವ್ಯಾಪಾರ ಕಾರಣ!

ದೆಹಲಿಯ ಕಾನ್ಸ್‌ಟಿಟ್ಯೂಷನಲ್ ಕ್ಲಬ್‌ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ತಮ್ಮ ಈ ವಾದಕ್ಕೆ ಸಮರ್ಥನೆಯನ್ನೂ ನೀಡಿದರು. ಜಿನ್ನಾ ಅವರ ಪೂರ್ವಜರು ರಜಪೂತರ ಉಪಜನಾಂಗವಾದ ಲೋಹಾನಾಕ್ಕೆ ಸೇರಿದವರು. ಸಸ್ಯಾಹಾರಿಗಳು. ಜಿನ್ನಾ ಅವರ ಅಜ್ಜ ಪ್ರೇಮ್‌ಜೀ ಭಾಯ್ ಠಕ್ಕರ್ ಅವರು ಗುಜರಾತಿನ ಕರಾವಳಿ ಪಟ್ಟಣ ವೆರಾವಲ್‌ನಲ್ಲಿ ಮೀನುಗಾರಿಕೆ ಉದ್ಯಮ ಆರಂಭಿಸಿದರು. ಇದು ಲೋಹಾನಾಗಳ ಆಕ್ರೋಶಕ್ಕೆ ಕಾರಣವಾಗಿ, ಜಿನ್ನಾ ಅಜ್ಜನಿಗೆ ಬಹಿಷ್ಕಾರ ಹಾಕಿದರು.

ಕೊನೆಗೆ ಪ್ರೇಮ್ ಜೀ ಹಾಗೂ ಅವರ ಪುತ್ರ ಪುಂಜನ್‌ಲಾಲ್ ಠಕ್ಕರ್ (ಜಿನ್ನಾ ತಂದೆ) ಇಸ್ಲಾಂಗೆ ಮತಾಂತರಗೊಂಡರು. ಧಾರ್ಮಿಕ ಹಾಗೂ ಸಾಮಾಜಿಕ ಬಹಿಷ್ಕಾರ ಅಂದು ಇರದೇ ಇದ್ದರೆ, ಜಿನ್ನಾ ತಂದೆ- ತಾತ ಇಸ್ಲಾಂಗೆ ಮತಾಂತರಗೊಳ್ಳುತ್ತಲೇ ಇರಲಿಲ್ಲ ಎಂದರು.