‘ನಮ್ಮ ಮೆಟ್ರೋ'ದ ಉದ್ಘೋಷಣೆ ಕನ್ನಡದಲ್ಲಿ ಆಗಬೇಕು, ನಾಡಭಾಷೆ ಮತ್ತು ಮಾತೃಭಾಷೆಗಳಿಗೆ ಪ್ರಾಶಸ್ತ್ಯ ನೀಡಲೇಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ್‌ ಕುಮಾರ್‌ ಹೇಳಿದ್ದಾರೆ.

ಬೆಂಗಳೂರು(ಜೂ.30): ‘ನಮ್ಮ ಮೆಟ್ರೋ'ದ ಉದ್ಘೋಷಣೆ ಕನ್ನಡದಲ್ಲಿ ಆಗಬೇಕು, ನಾಡಭಾಷೆ ಮತ್ತು ಮಾತೃಭಾಷೆಗಳಿಗೆ ಪ್ರಾಶಸ್ತ್ಯ ನೀಡಲೇಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಅನಂತ್‌ ಕುಮಾರ್‌ ಹೇಳಿದ್ದಾರೆ.

ಶಾಸ್ತ್ರಿ ಭವನದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅನಂತ್‌ಕುಮಾರ್‌, ಕನ್ನಡ ಕಡ್ಡಾಯ ಆಗ ಬೇಕು. ರೈಲ್ವೇಯೂ ತ್ರಿಭಾಷಾ ಸೂತ್ರ ಅನುಸರಿಸುತ್ತದೆ. ಮೊದಲು ಕನ್ನಡ, ಬಳಿಕ ಇಂಗ್ಲಿಷ್‌ ತದನಂತರ ಹಿಂದಿ ಬಳಸುವುದರಲ್ಲಿ ತಪ್ಪಿಲ್ಲ ಎಂದು ಪ್ರತಿಪಾದಿಸಿದ್ದಾರೆ.

1947 ಆಗಸ್ಟ್‌ 14ರ ಮಧ್ಯರಾತ್ರಿಯಂದು ಭಾರತವು ಹೇಗೆ ಅಖಂಡ ರಾಜಕೀಯ ಒಕ್ಕೂಟ ವಾಗಿ ಹೊರಹೊಮ್ಮಿತೋ ಅದೇ ರೀತಿ ಜೂನ್‌ 30ರ ಮಧ್ಯ ರಾತ್ರಿಯಿಂದ ಭಾರತವು ಏಕ ಆರ್ಥಿಕ ಒಕ್ಕೂಟವಾಗಿ ರೂಪುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.
-ಅನಂತಕುಮಾರ್‌ ಕೇಂದ್ರ ಸಚಿವ 

ಕೇಂದ್ರದ ನೆರವಿನಿಂದಲೇ ಸಾಲಮನ್ನಾ:

ರಾಜ್ಯಗಳು ಸಾಲಮನ್ನಾ ಮಾಡಲು ಬೇಕಾದ ಆರ್ಥಿಕ ಸಂಪನ್ಮೂಲ ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. 14ನೇ ಹಣಕಾಸು ಅಯೋಗದ ಶಿಫಾರಸು ಒಪ್ಪಿಕೊಂಡು ಶೆ.42ರಷ್ಟುಹಣವನ್ನು ಕೇಂದ್ರ ರಾಜ್ಯ ಸರ್ಕಾರಕ್ಕೆ ನೀಡುತ್ತಿದೆ. ಗ್ರಾಮೀಣ ಸಾಲ ವ್ಯವಸ್ಥೆಗೆಂದು ಮೀಸಲಾಗಿದ್ದ 8 ಲಕ್ಷ ಕೋಟಿ ಅನುದಾನದ ಪ್ರಮಾಣವನ್ನು 11 ಲಕ್ಷ ಕೋಟಿ ರು.ಗಳಿಗೆ ಏರಿಸಲಾಗಿದೆ. ಈ ಸಾಲದ ಮೇಲಿನ ಬಡ್ಡಿಯನ್ನು ಶೇ. 4ರಷ್ಟುಕಡಿತ ಮಾಡಲಾಗಿದ್ದು ಅದನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಈ ಸೌಲಭ್ಯವನ್ನು ಬಳಸಿಕೊಂಡು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಸಾಲ ಮನ್ನಾ ಮಾಡುತ್ತಿವೆ ಎಂದು ಅನಂತ್‌ಕುಮಾರ್‌ ಹೇಳಿದ್ದಾರೆ.

ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕಳೆದ ಮೂರು ವರ್ಷದಲ್ಲಿ ರಾಜ್ಯಕ್ಕೆ ಬರ ಪರಿಹಾರವಾಗಿ 5,122.45 ಕೋಟಿ ರು. ನೀಡಿದೆ. ಆದರೆ ಕೇಂದ್ರದಲ್ಲಿ 2004 ರಿಂದ 2014ರ ವರೆಗೆ ಹತ್ತು ವರ್ಷಗಳ ಕಾಲ ಆಳಿದ್ದ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ರಾಜ್ಯಕ್ಕೆ ಬರ ಮತ್ತು ನೆರೆ ಪರಿಹಾರವೆಂದು ನೀಡಿದ್ದು ಕೇವಲ 3,500 ಕೋಟಿ ರು. ಮಾತ್ರ ಎಂದು ಅನಂತ್‌ ಕುಮಾರ್‌ ಟೀಕಿಸಿದ್ದಾರೆ. 

ರಾಜ್ಯದಲ್ಲಿ ತೀವ್ರ ಬರವಿದ್ದು ಇದನ್ನು ನಿಭಾಯಿಸಲು ತೆಗೆದಿರುವ ಮೇವು ಬ್ಯಾಂಕ್‌, ಗೋಶಾಲೆಗಳ ಮಾಹಿತಿ ನೀಡಿ ಎಂದು ರಾಜ್ಯ ಸರ್ಕಾರವನ್ನು ಅನೇಕ ದಿನಗಳಿಂದ ಕೇಳುತ್ತಿದ್ದೇನೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಏಕೆಂದರೆ ಅವರು ಯಾವ ಪ್ರಮಾಣದಲ್ಲಿ ಗೋ ಶಾಲೆ, ಮೇವು ಬ್ಯಾಂಕ್‌ ತೆರೆಯಬೇಕೋ ಆ ಪ್ರಮಾಣದಲ್ಲಿ ತೆರೆದಿಲ್ಲ ಎಂದು ಕುಟುಕಿದ್ದಾರೆ.

ಜಿಎಸ್‌ಟಿಯನ್ನು ದೇಶದ ಎಲ್ಲಾ ರಾಜ್ಯಗಳು, ಪಕ್ಷಗಳು ಪಕ್ಷಾತೀತವಾಗಿ ಸರ್ವಾನುಮತದಿಂದ ಬೆಂಬಲಿಸಿವೆ. ಜಿಎಸ್‌ಟಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಜ್ವಲಂತ ಉದಾಹರಣೆ. ಇದು ಸ್ವತಂತ್ರ ಭಾರತದಲ್ಲಿನ ಅತ್ಯಂತ ದೊಡ್ಡ ಆರ್ಥಿಕ ಪರಿವರ್ತನೆ ಎಂದು ಅನಂತ್‌ ಕುಮಾರ್‌ ಬಣ್ಣಿಸಿದರು. ಕಾಂಗ್ರೆಸ್‌ ಸೆಂಟ್ರ ಹಾಲ್ ಕಾರ್ಯಕ್ರಮದಿಂದ ಸದ್ಯ ದೂರ ನಿಲ್ಲುವ ನಿಲುವು ತಾಳಿದರೂ ಕೂಡ ತನ್ನ ನಡೆಯನ್ನು ಬದಲಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.