ಕಳೆದ 40 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿದ್ದ ಕಾರ್ಯವನ್ನು ತಮ್ಮ ಸರಕಾರ ನೆರವೇರಿಸಿದೆ ಎಂದು ಮೋದಿ ಹೇಳಿದ್ದಾರೆ.

ಹಿಮಾಚಲಪ್ರದೇಶ: ನಿವೃತ್ತ ಯೋಧರಿಗೆ ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯ(ಒನ್ ರ್ಯಾಂಕ್ ಒನ್ ಪೆನ್ಷನ್) ಅನುಷ್ಠಾನದ ಕ್ರಮವಾಗಿ ಮೊದಲ ಕಂತಿನಲ್ಲಿ ಕೇಂದ್ರ ಸರಕಾರ 5,500 ರೂಪಾಯಿ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಕಳೆದ 40 ವರ್ಷಗಳಿಂದ ನನೆಗುದಿಯಲ್ಲಿ ಬಿದ್ದಿದ್ದ ಕಾರ್ಯವನ್ನು ತಮ್ಮ ಸರಕಾರ ನೆರವೇರಿಸಿದೆ ಎಂದು ಮೋದಿ ಹೇಳಿದ್ದಾರೆ. ಅಲ್ಲದೇ, ನಿವೃತ್ತ ಯೋಧರಿಗೆ ಇದ್ದ ಈ ಬವಣೆಯನ್ನು ನೀಗಿಸುವ ತಮ್ಮ ಕನಸು ಈಡೇರಿದಂತಾಗಿದೆ ಎಂದು ಪ್ರಧಾನಿ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ಇಲ್ಲಿಯ ಕಿನ್ನೂರ್ ಜಿಲ್ಲೆಯ ಸುಮಡೋ ಎಂಬಲ್ಲಿ ಸೇನಾ ಯೋಧರೊಂದಿಗೆ ದೀಪಾವಳಿ ಸಂಭ್ರಮ ಹಂಚಿಕೊಂಡ ಮೋದಿ, ಯೋಧರು ಜಾಗೃತರಾಗಿದ್ದರೆ ಮಾತ್ರ ನಾಗರಿಕರು ನಿಶ್ಚಿಂತೆಯಿಂದ ನಿದ್ರಿಸಲು ಸಾಧ್ಯವಾಗುತ್ತದೆ ಎಂದು ಹೇಳಿ ಸೈನಿಕರ ಮಹತ್ವವನ್ನು ಪ್ರಶಂಸಿಸಿದ್ದಾರೆ. ಪ್ರಧಾನಿಯವರು ಈ ಬಾರಿಯ ದೀಪಾವಳಿಯ ಆಚರಣೆಯನ್ನು ಯೋಧರಿಗೆ ಸಮರ್ಪಿಸಿದ್ದಾರೆ.