ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಬೇಕೆನ್ನುವ ಕಾರಣಕ್ಕೆ ಪ್ರಾಯೋಗಿಕವಾಗಿ ಒಂದು ರುಪಾಯಿ ಹಾಕಲಾಗಿದೆಯೇ ಹೊರತು ಇದು ಪರಿಹಾರದ ಹಣವಲ್ಲ. ವಾಸ್ತವ ಅರಿಯದೆ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಮೂಲಕ ‘ಒಂದು ರುಪಾಯಿ ಪರಿಹಾರ’ ಗೊಂದಲಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮಾಡಿದ ಟೀಕೆಗಳ ಕುರಿತು ಅಸಮಾಧಾನ ಹೊರಹಾಕಿದರು.

ಹುಬ್ಬಳ್ಳಿ (ಜೂ.10): ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಬೇಕೆನ್ನುವ ಕಾರಣಕ್ಕೆ ಪ್ರಾಯೋಗಿಕವಾಗಿ ಒಂದು ರುಪಾಯಿ ಹಾಕಲಾಗಿದೆಯೇ ಹೊರತು ಇದು ಪರಿಹಾರದ ಹಣವಲ್ಲ. ವಾಸ್ತವ ಅರಿಯದೆ ಮಾತನಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಮೂಲಕ ‘ಒಂದು ರುಪಾಯಿ ಪರಿಹಾರ’ ಗೊಂದಲಕ್ಕೆ ಸಂಬಂಧಿಸಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮಾಡಿದ ಟೀಕೆಗಳ ಕುರಿತು ಅಸಮಾಧಾನ ಹೊರಹಾಕಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಾಸ್ತವ ಅರಿಯದೆ ಈ ರೀತಿ ಮಾತನಾಡುವುದು ಸರಿಯಲ್ಲ. ಕುಮಾರಸ್ವಾಮಿಯವರೂ ತಿಳಿಯದೆ ಮಾತನಾಡಿದ್ದಾರೆ. ಇಂಧನ ಇಲಾಖೆಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅವರು ಬಹುತೇಕ ಸಮಯ ‘ಹಿಟ್ ಆ್ಯಂಡ್ ರನ್ ಕೇಸ್’ ಮನುಷ್ಯ. ಈ ಕುರಿತು ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ದಾಖಲೆ ಬಹಿರಂಗಗೊಳಿಸಿದ ಬಳಿಕ ಆ ಬಗ್ಗೆ ಮಾತನಾಡುತ್ತೇನೆ ಎಂದರು. 
ಪತ್ರ ಬರೆದರೂ ಉತ್ತರಿಸಲ್ಲ: 
ಮಹದಾಯಿ ಹಾಗೂ ಕಳಸಾ-ಬಂಡೂರಿ ಯೋಜನೆ ಕುರಿತು ಗೋವಾ, ಮಹಾರಾಷ್ಟ್ರ ಸಿಎಂಗಳಿಗೆ ಪತ್ರ ಬರೆದಿದ್ದು, ಚರ್ಚಿಸಲು ನೀವಾದರೂ ಬನ್ನಿ, ನಾನಾದರೂ ಬರುತ್ತೇನೆ ಎಂದಿದ್ದೇನೆ. ಆದರೆ, ಅವರಿಂದ ಉತ್ತರ ಬಂದಿಲ್ಲ. ಹಿಂದೆ ಪತ್ರ ಬರೆದಾಗ ಸಭೆ ಆಯೋಜಿಸಿದ್ದರು. ಆದರೆ, ಗೋವಾ ಸಿಎಂ ಆಗಮಿಸದೇ ಸಭೆ ಮೊಟಕುಗೊಳಿಸಲಾಯಿತು. ಈಗ ಪತ್ರ ಬರೆದಿದ್ದರೂ ಅಲ್ಲಿನ ಸಿಎಂಗಳು ಬರುತ್ತಾರೆ ಎನ್ನುವ ಖಾತ್ರಿ ಇಲ್ಲ. ಹೀಗಾಗಿ, ಬಿಜೆಪಿ ಸಂಸದರು ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಒತ್ತಡ ಹೇರಬೇಕು. ಪ್ರಧಾನಿಗಳೇ ಸಭೆ ಕರೆದರೆ, ೩ ರಾಜ್ಯದ ಸಿಎಂಗಳು ಹಾಜರಾಗುತ್ತಾರೆ. ಆಗಷ್ಟೇ ಚರ್ಚೆ ಸಾಧ್ಯ. ಆದರೆ, ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದರು.
ಮೊಸರಲ್ಲಿ ಕಲ್ಲು ಹುಡುಕೋ ಕೆಲಸ: 
ಹಿಂದೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದಾಗ, ಇಲ್ಲಿನ ಸಂಸದರು ಚಕಾರ ಎತ್ತಲಿಲ್ಲ. ಹೀಗಾಗಿ, ಮತ್ತೆ ನಿಯೋಗ ಕೊಂಡೊಯ್ಯುವ ಪ್ರಶ್ನೆಯೇ ಇಲ್ಲ. ನ್ಯಾಯಾಧಿಕರಣದ ಹೊರತಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ನ್ಯಾಯಾಧಿಕರಣವೇ ಹೇಳಿದೆ. ಹೀಗಿರುವಾಗ, ಪ್ರಧಾನಿ ಮಧ್ಯಸ್ಥಿಕೆ ವಹಿಸಿದರೆ ಪರಿಹಾರ ಸಾಧ್ಯ. ಆದರೆ, ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳು ಅಲ್ಲಿನ ವಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದು ಬಿಟ್ಟು ಕಾಂಗ್ರೆಸ್ ನಾಯಕರನ್ನು ಒಪ್ಪಿಸಿ ಎಂದು ಹೇಳಿ ಬಿಜೆಪಿ ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ. ಇಲ್ಲಿ ನಾವು ವಿಪಕ್ಷ ನಾಯಕರೊಂದಿಗೆ ಚರ್ಚಿಸಿ ಅವರ ಸಲಹೆ ಪಡೆಯುವಂತೆ ಅಲ್ಲಿನ ಆಡಳಿತ ಪಕ್ಷದಿಂದ ಈ ಕೆಲಸ ಆಗುತ್ತಿಲ್ಲ ಎಂದರು. 
ಹಿಂದೆ ಅಂತಾರಾಜ್ಯ ವಿವಾದಗಳು ಹುಟ್ಟಿದಾಗ ಪ್ರಧಾನಿಗಳಾಗಿದ್ದ ಇಂದಿರಾ ಗಾಂಧಿ, ವಾಜಪೇಯಿ, ದೇವೇಗೌಡರು ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ, ಇಂದಿನ ಪ್ರಧಾನಿಗಳಿಂದ ಇಂತಹ ಪ್ರಯತ್ನ ನಡೆಯುತ್ತಿಲ್ಲ. ಈ ಸಮಸ್ಯೆಯನ್ನು ರಾಜಕೀಯ ಲಾಭಕ್ಕಾಗಿ ನೋಡುವುದು ಸರಿಯಲ್ಲ ಎಂದರು.