ದೇಶದ ಮೊದಲ ಬುಲೆಟ್‌ ರೈಲು 2023ರಲ್ಲಿ ಮುಂಬೈ-ಅಹಮದಾಬಾದ್‌ ನಡುವೆ ಕಾರ್ಯಾರಂಭ ಮಾಡುವುದಕ್ಕೂ ಮುನ್ನ 2022ರ ಆ.15ರಂದು ಗುಜರಾತಿನ ಸೂರತ್‌ನಿಂದ ಬಿಲ್ಲಿಮೋರಾ ನಗರಗಳ ಮಧ್ಯೆ ಸಂಚರಿಸುವ ನಿರೀಕ್ಷೆ ಇದೆ.

ವಡೋದರಾ[ಸೆ.1] ಭಾರತದ 75ನೇ ಸ್ವಾತಂತ್ರ್ಯೋತ್ಸವದ ದ್ಯೋತಕವಾಗಿ 2022ರ ಆ.15ರಂದು ಮೊದಲ ಬುಲೆಟ್‌ ರೈಲನ್ನು ಓಡಿಸಲು ಮೋದಿ ಸರ್ಕಾರ ಬಯಸಿದೆ. 50 ಕಿ.ಮೀ. ಉದ್ದದ ಈ ಮಾರ್ಗವನ್ನು ಬುಲೆಟ್‌ ರೈಲು ಕೇವಲ 15 ನಿಮಿಷಗಳಲ್ಲಿ ಕ್ರಮಿಸಲಿದೆ.

ನೇರವಾದ ಮಾರ್ಗ ಮತ್ತು ನಿರ್ಮಾಣದ ದೃಷ್ಟಿಯಿಂದ ಒಂದು ವರ್ಷ ಮುನ್ನವೇ ಬುಲೆಟ್‌ ರೈಲು ಓಡಿಸಲು ಸಾಧ್ಯವಿದೆ ಎಂದು ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೆ ಕಾರ್ಪೊರೇಷನ್‌ ತಿಳಿಸಿದೆ. 508 ಕಿ.ಮೀ. ಉದ್ದದ ಮುಂಬೈ-ಅಹಮದಾಬಾದ್‌ ನಡುವಿನ ಬುಲೆಟ್‌ ರೈಲು ಮಾರ್ಗ 2023ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹಳಿ ಬಿರುಕು ಪತ್ತೆ ವ್ಯವಸ್ಥೆ: ಇದೇ ವೇಳೆ ಮುಂಬೈ- ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗದ ಹಳಿಯಲ್ಲಿ ಬಿರುಕು ಉಂಟಾಗಿದ್ದರೆ ಅದನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ವ್ಯವಸ್ಥೆಯನ್ನು ಅಳವಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಲ್ಲದೇ ಅತ್ಯಾಧುನಿಕ ಬೆಂಕಿ ಅನಾಹುತ ಪತ್ತೆ ವ್ಯವಸ್ಥೆ ಮತ್ತು ಹಳಿತಪ್ಪದಂತೆ ತಡೆಯುವ ಕ್ರಮಗಳನ್ನು ಪರಿಚಯಿಸಲಾಗುತ್ತಿದೆ.