ನವದೆಹಲಿ[ಜು.28]: ಮರಗಳು ಹಾಗೂ ಬೆಟ್ಟಗಳ ಮರೆಯಲ್ಲಿ ನಿಂತು ಎದುರಾಳಿ ಪಡೆಗಳ ಮೇಲೆ ಎರಗುವ, ಆಗಸ ಮತ್ತು ಭೂಮಿ ಎರಡರಲ್ಲೂ ಶತ್ರು ಸಂಹಾರ ಮಾಡುವ ಸಾಮರ್ಥ್ಯ ಹೊಂದಿರುವ ಅಪಾಚೆ ಗಾರ್ಡಿಯನ್‌ ಅಟ್ಯಾಕ್‌ ಹೆಲಿಕಾಪ್ಟರ್‌ ಭಾರತೀಯ ವಾಯುಪಡೆಯ ಬತ್ತಳಿಕೆಗೆ ಸೇರುವ ದಿನ ಹತ್ತಿರವಾಗಿದೆ.

ಅಮೆರಿಕದ ಬೋಯಿಂಗ್‌ ಕಂಪನಿಯಿಂದ 22 ಕಾಪ್ಟರ್‌ಗಳನ್ನು ಖರೀದಿಸಲು ಭಾರತ ಒಪ್ಪಂದ ಮಾಡಿಕೊಂಡಿದೆ. ಆ ಪೈಕಿ ಮೊದಲ ಹೆಲಿಕಾಪ್ಟರ್‌ ಅನ್ನು ಅಮೆರಿಕದ ಅರಿಜೋನಾದ ಮೆಸಾದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಬೋಯಿಂಗ್‌ ಕಂಪನಿ ಹಸ್ತಾಂತರ ಮಾಡಿದೆ. ಈ ಹೆಲಿಕಾಪ್ಟರ್‌ನ ಮೊದಲ ಬ್ಯಾಚ್‌ ಜುಲೈನಲ್ಲಿ ಭಾರತಕ್ಕೆ ಆಗಮಿಸಲಿದೆ.

ವಾಯುಪಡೆಯ ಪ್ರತಿನಿಧಿಯಾಗಿ ಏರ್‌ ಮಾರ್ಷಲ್‌ ಎ.ಎಸ್‌. ಬುಟೋಲಾ ಅವರು ಮೊದಲ ಕಾಪ್ಟರ್‌ ಅನ್ನು ಸ್ವೀಕರಿಸಿದರು. 22 ಅಪಾಚೆ ಕಾಪ್ಟರ್‌ ಖರೀದಿ ಸಂಬಂಧ 2015ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಹಾಗೂ ಬೋಯಿಂಗ್‌ ಕಂಪನಿ ಜತೆ 13,952 ಕೋಟಿ ರು. ಮೌಲ್ಯದ ಒಪ್ಪಂದವನ್ನು ಭಾರತ ಮಾಡಿಕೊಂಡಿತ್ತು. ಈ ಎಲ್ಲ ವಿಮಾನಗಳು 2020ರ ಮಾಚ್‌ರ್‍ನೊಳಗೆ ವಾಯುಪಡೆ ಸೇರಲಿವೆ.