Asianet Suvarna News Asianet Suvarna News

ದಿಢೀರ್ ಬೆಂಕಿ ಹತ್ತಿ ಕಾರಿನೊಳಗೆ ತಾಯಿ ಮಗು ಸಜೀವ ದಹನ

ಅಪಾರ್ಟ್‌ಮೆಂಟ್ ಕೆಳ ಮಹಡಿಯ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ತಾಯಿ ಮತ್ತು ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್‌ಫೀಲ್ಡ್ ಸಮೀಪ ಶುಕ್ರವಾರ ನಡೆದಿದೆ.

Fire Accident In Bengaluru

ಬೆಂಗಳೂರು : ಅಪಾರ್ಟ್‌ಮೆಂಟ್ ಕೆಳ ಮಹಡಿಯ ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ದುರಂತದಲ್ಲಿ ತಾಯಿ ಮತ್ತು ನಾಲ್ಕು ವರ್ಷದ ಗಂಡು ಮಗು ಸಜೀವ ದಹನವಾಗಿರುವ ದಾರುಣ ಘಟನೆ ವೈಟ್‌ಫೀಲ್ಡ್ ಸಮೀಪ ಶುಕ್ರವಾರ ನಡೆದಿದೆ.

ನೆಲ್ಲೂರಹಳ್ಳಿಯ ಬೋರ್‌ವೆಲ್ ರಸ್ತೆಯ ‘ಸುಮಧುರ ಅಪಾರ್ಟ್‌ಮೆಂಟ್’ ನಿವಾಸಿ ನೇಹಾ ವರ್ಮಾ (30) ಹಾಗೂ ಅವರ ಪುತ್ರ ಪರಮ್ (4) ಮೃತರು. ಮಧ್ಯಾಹ್ನ ಶಾಪಿಂಗ್‌ಗೆ ಹೋಗಿ ಮರಳಿದ ನೇಹಾ ಅವರು, ಅಪಾರ್ಟ್‌ಮೆಂಟ್ ಕೆಳಮಹಡಿಯ ಪಾರ್ಕಿಂಗ್‌ನಲ್ಲಿ ಕಾರು ನಿಲ್ಲಿಸಿದಾಗ ಈ ಭೀಕರ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. 

ರಕ್ಷಣೆಗೆ ಧಾವಿಸುವ ವೇಳೆಗೆ ಅಗ್ನಿಗೆ ಆಹುತಿ: ಬೆಳಗಾವಿ ಜಿಲ್ಲೆಯ ರಾಜೇಶ್ ಅವರು, ದೊಮ್ಮಲೂರಿನ ಡೈಮೆಂಡ್ ಡಿಸ್ಟ್ರಿಕ್‌ನಲ್ಲಿ ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಅವರು, ತಮ್ಮ ಪತ್ನಿ ನೇಹಾ ಮತ್ತು ಪುತ್ರನ ಜತೆ ಸುಮಧುರ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಬೆಳಗ್ಗೆ ರಾಜೇಶ್ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿದ್ದ ನೇಹಾ ಅವರು, ಮಧ್ಯಾಹ್ನ 12.5ಕ್ಕೆ ಮಗನನ್ನು ಕರೆದುಕೊಂಡು ‘ಮಾರುತಿ ರಿಡ್ಜ್’ನಲ್ಲಿ ಹೊರ ಹೋಗಿದ್ದರು. ನಂತರ ಮಧ್ಯಾಹ್ನ 3.20ಕ್ಕೆ ಮರಳಿದ ನೇಹಾ, ಅಪಾರ್ಟ್‌ಮೆಂಟ್ ಕೆಳಮಹಡಿಯಲ್ಲಿ ಕಾರು ನಿಲ್ಲಿಸಿದ್ದಾರೆ.

ಇದಾದ ಕೆಲ ಸೆಕೆಂಡ್‌ನಲ್ಲೇ ಬೆಂಕಿ ಕಾಣಿಸಿಕೊಂಡು ಅವರ ಕಾರು ಹೊತ್ತಿ ಉರಿದಿದೆ. ಅಗ್ನಿ ಜ್ವಾಲೆಗೆ ಸಿಲುಕಿದ ತಾಯಿ-ಮಗನ ಚೀರಾಟ ಕೇಳಿದ ಅಪಾರ್ಟ್’ಮೆಂಟ್ ಕಾವಲುಗಾರರು, ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ನೀರು ಸುರಿದು ಅಗ್ನಿ ನಂದಿಸಲು ಕಾವಲುಗಾರರ ಯತ್ನವೂ ವಿಫಲವಾಗಿದೆ. ಅಷ್ಟರಲ್ಲಿ ಈ ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಅಗ್ನಿಶಾಮಕ ದಳದ ಸಿಬ್ಬಂದಿ, ಒಂದು ವಾಹನದಲ್ಲಿ ಆಗಮಿಸಿ ಬೆಂಕಿ ಆರಿಸಿದ್ದಾರೆ. ಆ ವೇಳೆಗೆ ಕಾರಿನೊಳಗೆ ಅವರು ಸಜೀವ ದಹನವಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ನಿಖರ ಕಾರಣ ಗೊತ್ತಾಗಿಲ್ಲ. ಆದರೆ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಿಡಿ ಕಾಣಿಸಿಕೊಂಡಿದ್ದು, ತೈಲ ಟ್ಯಾಂಕ್’ಗೆ ತಗುಲಿದ ಕೂಡಲೇ ಬೆಂಕಿ ತೀವ್ರತೆ ಹೆಚ್ಚಾಗಿದೆ. ಆದರೆ ಬೆಂಕಿ ಕಾಣಿಸಿದ ತಕ್ಷಣವೇ ಬಾಗಿಲು ತೆರೆಯುವ ನೇಹಾ ಅವರ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios