ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಸಂಬಂಧ ದಾಖಲಾಗಿರುವ ಎಸಿಬಿ ಎಫ್ಐಆರ್ ಸದ್ದು ಮಾಡುತ್ತಿರುವ ಮಧ್ಯದಲ್ಲೇ ಎಸಿಬಿಯಿಂದ ಮತ್ತೊಂದು ಎಫ್ಐಆರ್ ದಾಖಲಾಗಿರುವುದು ಹುಬ್ಬೇರಿಸಿದೆ. 2007-08ರಲ್ಲಿ ಕೆಎಂಎಫ್ ಜಾಗವನ್ನು ಅಕ್ರಮ ಪರಭಾರೆ ಮಾಡಲಾಗಿದೆ ಎಂದು ಅಂದಿನ ಕೆಎಂಎಫ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರು (ಆ.20): ಯಡಿಯೂರಪ್ಪ ವಿರುದ್ಧ ಡಿನೋಟಿಫಿಕೇಶನ್ ಸಂಬಂಧ ದಾಖಲಾಗಿರುವ ಎಸಿಬಿ ಎಫ್ಐಆರ್ ಸದ್ದು ಮಾಡುತ್ತಿರುವ ಮಧ್ಯದಲ್ಲೇ ಎಸಿಬಿಯಿಂದ ಮತ್ತೊಂದು ಎಫ್ಐಆರ್ ದಾಖಲಾಗಿರುವುದು ಹುಬ್ಬೇರಿಸಿದೆ. 2007-08ರಲ್ಲಿ ಕೆಎಂಎಫ್ ಜಾಗವನ್ನು ಅಕ್ರಮ ಪರಭಾರೆ ಮಾಡಲಾಗಿದೆ ಎಂದು ಅಂದಿನ ಕೆಎಂಎಫ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ರಾಜ್ಯದಲ್ಲಿ ಟಾರ್ಗೆಟ್ ಪಾಲಿಟಿಕ್ಸ್?
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಎಸಿಬಿ ಎಫ್ಐಆರ್ ಈಗಾಗಲೇ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ಮಧ್ಯೆ ತಿಕ್ಕಾಟ ತಂದಿಟ್ಟಿದೆ. ಇದರ ಮಧ್ಯೆಯೇ ಬೆಂಗಳೂರಿನ ಕೋರಮಂಗಲದಲ್ಲಿ ಕೆಎಂಎಫ್ಗೆ ಸೇರಿದ 4 ಎಕರೆ 14 ಗುಂಟೆ ಜಮೀನು ದುರುಪಯೋಗಪಡಿಸಿಕೊಂಡು ವಾಣಿಜ್ಯ ಸಂಕೀರ್ಣ ಕಟ್ಟಿ ಸರ್ಕಾರಕ್ಕೆ 200 ಕೋಟಿ ರೂ. ನಷ್ಟ ಉಂಟು ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಮೇ ತಿಂಗಳಿನಲ್ಲಿ ಎಸಿಬಿಗೆ ದೂರು ಸಲ್ಲಿಸಿದ್ದರು. 2007-08ರಲ್ಲಿ ನಡೆದ ಪ್ರಕರಣ ಇದಾಗಿದ್ದು, ಈ ಸಂಬಂಧ ಆಗಸ್ಟ್ 9ರಂದು ಕೆಎಂಎಫ್ನ ಅಂದಿನ ಆಡಳಿತ ಮಂಡಳಿ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ 2007-08ರಲ್ಲಿ ಹೆಚ್.ಡಿ. ರೇವಣ್ಣ ಮತ್ತು ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿ ಇದ್ದಿದ್ದು ಈಗ ಕುತೂಹಲ ಮೂಡಿಸಿದೆ. ಅಂದಿನ ಕೆಎಂಎಫ್ ಎಂಡಿ ರಾಮಲಿಂಗೇಗೌಡ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದ ಸತ್ಯನಾರಾಯಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಪೂರಕವಾಗಿ ಹಾಸನದಲ್ಲಿ ಮಾತನಾಡಿರುವ ಪಶುಸಂಗೋಪನಾ ಸಚಿವ ಎ. ಮಂಜು, ಕೆಎಂಎಫ್ ಅಧ್ಯಕ್ಷರ ನಿರ್ದೇಶನದ ಬಳಿಕವೇ ಪ್ರಾಜೆಕ್ಟ್ ವರ್ಕ್ ನಡೆಯುವುದಾಗಿದ್ದು, ಹೆಚ್.ಡಿ. ರೇವಣ್ಣ ಅವರ ಪಾತ್ರದ ಬಗ್ಗೆ ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದಿರುವುದು ಅಚ್ಚರಿ ಮೂಡಿಸಿದೆ.
ಒಟ್ಟಾರೆ, ಕೆಎಂಎಫ್ ಪ್ರಕರಣದಲ್ಲಿ ಎಸಿಬಿ ದಾಖಲಿಸಿಕೊಂಡಿರುವ ಎಫ್ಐಆರ್ ಹಿಂದೆ ರಾಜಕೀಯದ ನೆರಳು ಸಣ್ಣದಾಗಿ ಗೋಚರಿಸುತ್ತಿದ್ದು, ಇನ್ಯಾವ ತಿರುವು ಪಡೆದುಕೊಳ್ಳುತ್ತದೋ ಗೊತ್ತಿಲ್ಲ.
