ಚಲನಚಿತ್ರ ನಟ ದುನಿಯಾ ವಿಜಯ್‌ ಜೈಲು ಸೇರಿದ ಬಳಿಕ ಈಗ ಅವರ ವಿರುದ್ಧ ದೂರು ದಾಖಲಿಸಿದ್ದ ಎದುರಾಳಿಗೂ ಬಂಧನ ಭೀತಿ ಎದುರಾಗಿದೆ.

ಬೆಂಗಳೂರು : ತಮ್ಮ ಗೆಳೆಯ ಮೇಲೆ ಹಲ್ಲೆ ಪ್ರಕರಣದಲ್ಲಿ ಚಲನಚಿತ್ರ ನಟ ದುನಿಯಾ ವಿಜಯ್‌ ಜೈಲು ಸೇರಿದ ಬಳಿಕ ಈಗ ಅವರ ವಿರುದ್ಧ ದೂರು ದಾಖಲಿಸಿದ್ದ ಎದುರಾಳಿಗೂ ಬಂಧನ ಭೀತಿ ಎದುರಾಗಿದೆ.

ನಟ ದುನಿಯಾ ವಿಜಯ್‌ ಹಾಗೂ ಅವರ ಪುತ್ರ ಸಾಮ್ರಾಟ್‌ಗೆ ಜೀವ ಬೆದರಿಕೆ ಹಾಕಿದ ಆರೋಪದಡಿ ಜಿಮ್‌ ತರಬೇತುದಾರ ಕೃಷ್ಣಮೂರ್ತಿ ಅಲಿಯಾಸ್‌ ಪಾನಿಪೂರಿ ಕಿಟ್ಟಿವಿರುದ್ಧ ಎಫ್‌ಐಆರ್‌ ದಾಖಲಿಸಿದ ಹೈಗ್ರೌಂಡ್ಸ್‌ ಠಾಣೆ ಪೊಲೀಸರು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಿಟ್ಟಿಮತ್ತು ಆತನ ತಂಡಕ್ಕೆ ಪೊಲೀಸರು ಸೂಚಿಸಿದ್ದಾರೆ.

ಕಳೆದ ಶನಿವಾರ ರಾತ್ರಿ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆದಿದ್ದ ಗಲಾಟೆ ವಿಚಾರವಾಗಿ ವಿಜಯ್‌ ಅವರ ನೀಡಿದ್ದ ದೂರನ್ನು ಮೊದಲು ಎನ್‌ಸಿಆರ್‌ (ಸಾಮಾನ್ಯ ಪ್ರಕರಣ) ಎಂದು ಪರಿಗಣಿಸಿದ್ದ ಪೊಲೀಸರು, ನ್ಯಾಯಾಲಯದ ಆದೇಶದ ಮೇರೆಗೆ ಆ ದೂರಿನ್ವಯ ಸೋಮವಾರ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.