ಜಿಲ್ಲೆಯ ಹಾಲುವರ್ತಿ ಗ್ರಾಮದ ಯುವತಿ ಹೊಸಹಳ್ಳಿ ತಾಂಡಾದ ಯುವಕನನ್ನು ಮದುವೆಯಾಗಿದ್ದೇ ಗಲಾಟೆಗೆ ಕಾರಣವಾಗಿದೆ.

ದಾವಣಗೆರೆ(ಮೇ.28): ಪ್ರೇಮಿಗಳ ಮದುವೆ ಎರಡು ಗ್ರಾಮಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿರುವ ಘಟನೆ ದಾವಣಗೆರೆ ಜಿಲ್ಲೆಯ 2 ಗ್ರಾಮಗಳಲ್ಲಿ ನಡೆದಿದೆ.

ಜಿಲ್ಲೆಯ ಹಾಲುವರ್ತಿ ಗ್ರಾಮದ ಯುವತಿ ಹೊಸಹಳ್ಳಿ ತಾಂಡಾದ ಯುವಕನನ್ನು ಮದುವೆಯಾಗಿದ್ದೇ ಗಲಾಟೆಗೆ ಕಾರಣವಾಗಿದೆ. ಹೈಸ್ಕೂಲ್​ನಲ್ಲಿದ್ದಾಗಲೇ ಪ್ರೀತಿಸುತ್ತಿದ್ದ ಹಾಲುವರ್ತಿ ಗ್ರಾಮದ ಯುವತಿ ಹಾಗೂ ಹೊಸಹಳ್ಳಿ ತಾಂಡಾದ ಯುವಕ ಪೋಷಕರ ವಿರೋಧದ ಮಧ್ಯೆ ಓಡಿಹೋಗಿ ಮದುವೆಯಾಗಿದ್ದರು. ಪ್ರೇಮಿಗಳ ಅಂತರ್ಜಾತಿ ವಿವಾಹ ಎರಡು ಗ್ರಾಮಗಳು ಪರಸ್ಪರ ದ್ವೇಷ ಸಾಧಿಸುವಂತಾಗಿದೆ. ಇದೇ ವಿಚಾರದಿಂದ ಹಾಲುವರ್ತಿ ಗ್ರಾಮಸ್ಥರು ಹೊಸಹಳ್ಳಿ ತಾಂಡಾ ಜನರು ಕುಡಿಯುವ ನೀರಿಗೂ ಬ್ರೇಕ್​ ಹಾಕಿದ್ದಾರೆ.ಡೈರಿಗೆ ಹಾಲು ಹಾಕದಂತೆ ತಡೆದಿದ್ದಾರೆ.

ಅಷ್ಟೇ ಅಲ್ಲದೇ ಗ್ರಾಮದ ಏಕೈಕ ಸಾರಿಗೆ ಬಸ್ ಸಂಚಾರಕ್ಕೂ ಅಡ್ಡಿಪಡಿಸಿದ್ದಾರೆ. ಇದರಿಂದ ಹೊಸಹಳ್ಳಿ ತಾಂಡಾದ ನಿವಾಸಿಗಳು ಪರದಾಡುವಂತಾಗಿದೆ. ಸಾಲದೂ ಅಂತ ಯುವಕನ ತಂದೆಯನ್ನು ದೇವಸ್ಥಾನದಲ್ಲಿ ಕೂಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿದ್ದಾರಂತೆ. ಪ್ರಕರಣ ಈಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ರಕ್ಷಣೆಗಾಗಿ ಹೊಸಹಳ್ಳಿ ತಾಂಡಾ ಜನರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.