ಚೀನಾದಲ್ಲಿ ನಡೆದ ಘಟನೆಯೊಂದು ಎಲ್ಲರಿಗೂ ಶಾಕ್ ನೀಡಿದೆ. ನೈಋತ್ಯ ಚೀನಾದಲ್ಲಿ ಚಲಿಸುತ್ತಿದ್ದ ಬಸ್‌ವೊಂದರಲ್ಲಿ ಮಹಿಳೆ ಹಾಗೂ ಚಾಲಕ ಜಗಳವಾಡಿಕೊಂಡ ಪರಿಣಾಮವಾಗಿ ಬಸ್ ನದಿಗೆ ಬಿದ್ದು 13 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ವಿಚಾರವನ್ನು ಪೊಲೀಸರು ಖಚಿತಪಡಿಸಿದ್ದು, ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

ಭಾನುವಾರ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ವೈರಲ್ ಆದ ವಿಡಿಯೋದಲ್ಲಿ, ಮಹಿಳೆಯು ವಸ್ತುವೊಂದರಿಂದ ಚಾಲಕನ ತಲೆಗೆ ಹೊಡೆಯುವ ಮೂಲಕ ದಾಳಿ ನಡೆಸಲು ಪ್ರಚೋದಿಸುತ್ತಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಹೀಗಿರುವಾಗ ಮಹಿಳೆಯು ಎರಡನೇ ಬಾರಿ ಚಾಲಕನ ತಲೆಗೆ ಹೊಡೆದಿದ್ದು, ಈ ವೇಳೆ ಏನು ಮಾಡಬೇಕೆಂದು ತೋಚದ ಆತ ವೀಲನ್ನು ಎಡ ಬದಿಗೆ ತಿರುಗಿಸಿದ್ದಾನೆ. ಇಬ್ಬರ ನಡುವೆ ಜಗಳ ನಡೆಯುತ್ತಿದ್ದಾಗಲೇ ಬಸ್ ಮುಂದಕ್ಕೆ ಸಾಗಿದ್ದು, ಯಾಂಗ್ತ್ಚೀ ಸೇತುವೆಯನ್ನು ದಾಟುತ್ತಿದ್ದ ವೇಳೆ ರೇಲಿಂಗ್ ಮುರಿದು ನದಿಗೆ ಬಿದ್ದಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಪೊಲೀಸರು ಒಟ್ಟು 13 ಮೃತದೇಹಗಳನ್ನು ಹೊರತೆಗೆದಿದ್ದು, ಪ್ರಯಾಣಿಕರಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆನ್ನಲಾಗಿದೆ.

ಈ ಕುರಿತಾಗಿ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸರು 48 ವರ್ಷದ ಮಹಿಳೆಯು ಬಸ್‌ ತಂಗುದಾಣದಲ್ಲಿ ಬಸ್ ನಿಲ್ಲಿಸದ ವಿಚಾರವಾಗಿ ಜಗಳವಾಡಿದ್ದು, ತನ್ನನ್ನು ಬಸ್‌ನಿಂದ ಇಳಿಸುವಂತೆ ಕೇಳಿಕೊಂಡಿದ್ದರು. ಆದರೆ ಚಾಲಕ ಇದಕ್ಕೆ ಒಪ್ಪದಿದ್ದಾಗ ಕೋಪಗೊಂಡ ಆಕೆ ಜಗಳ ಆರಂಭಿಸಿದ್ದಾರೆ. ಇದು ಅತಿಯಾಗಿ 13 ಮಂದಿಯನ್ನು ಬಲಿ ಪಡೆದಿದೆ ಎಂದಿದ್ದಾರೆ.