2 ಕ್ರಿಕೆಟ್ ತಂಡಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ

Fight between 2 cricket teams ends in murder
Highlights

ಕ್ರಿಕೆಟ್ ಆಡುವ ವಿಚಾರಕ್ಕೆ ಜಗಳ ನಡೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣಾ ಸರಹದ್ದಿನ ಜೆ.ಸಿ.ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. 

ಬೆಂಗಳೂರು : ಕ್ರಿಕೆಟ್ ಆಡುವ ವಿಚಾರಕ್ಕೆ ಜಗಳ ನಡೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣಾ ಸರಹದ್ದಿನ ಜೆ.ಸಿ.ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ಮಹಾಲಕ್ಷ್ಮೀ ಲೇಔಟ್‌ನ ಶ್ರೀರಾಮನಗರದ ಮಣಿಕಂಠ ಅಲಿಯಾಸ್ ದೊಡ್ಡಕಾಟು (22) ಮೃತ ಯುವಕ. 

ಮಣಿಕಂಠ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಈತ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಭಾನುವಾರ ಮಧ್ಯಾಹ್ನ ನಾಲ್ಕು ಗಂಟೆ ಸುಮಾರಿಗೆ ಸ್ನೇಹಿತರೊಂದಿಗೆ ಗೆಳೆಯರ ಬಳಗ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದ.

ಕ್ರಿಕೆಟ್ ಪಂದ್ಯದ ವಿಚಾರವಾಗಿ ಎದುರಾಳಿ ತಂಡದ ಯುವಕನೊಬ್ಬನ ಜತೆ ಜಗಳವಾಡಿ ಆತನ ಮೇಲೆ ಹಲ್ಲೆ ನಡೆಸಿದ್ದ. ಮಣಿಕಂಠನಿಂದ ಹಲ್ಲೆಗೊಳಗಾಗಿದ್ದ ಯುವಕ ಹಲ್ಲೆಗೊಳಗಾದ ಬಗ್ಗೆ ತನ್ನ ಸ್ನೇಹಿತರಿಗೆ ಹೇಳಿದ್ದ. ಸಂಜೆ ಆರು ಗಂಟೆ ಸುಮಾರಿಗೆ ಜೆ.ಸಿ.ನಗರದಲ್ಲಿದ್ದ ಮಣಿಕಂಠನ ಮೇಲೆ ನಾಲ್ಕೈದು ದುಷ್ಕರ್ಮಿಗಳ ತಂಡ ಎರಗಿ ಹಲ್ಲೆ ನಡೆಸಿದೆ. ಗಂಭೀರವಾಗಿ ಗಾಯಗೊಂಡ ಮಣಿಕಂಠ ಸ್ಥಳದಲ್ಲಿಯೇ
ಮೃತಪಟ್ಟಿದ್ದಾನೆ. 

ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯ ಸಿಸಿಟಿವಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader