ದಾಳಿಕೋರನ ತಂದೆಗೆ ಶುಭಾಶಯಗಳ ಮಹಾಪೂರ!| ಆದಿಲ್‌ ಅಹಮದ್‌ ದಾರ್‌ ಮನೆಗೆ ಸ್ಥಳೀಯರ ಭೇಟಿ| ಪುತ್ರನ ‘ಶೌರ್ಯ’ದ ಬಗ್ಗೆ ಹೊಗಳಿಕೆಯ ಮಾತು| ಆದರೆ ದಾಳಿಕೋರ ಪುತ್ರನ ಬಗ್ಗೆ ತಂದೆಯ ಆಕ್ರೋಶ

ಪುಲ್ವಾಮಾ[ಫೆ.18]: ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರ ಬಲಿಪಡೆದ ಆತ್ಮಾಹುತಿ ದಾಳಿಕೋರ ಅದಿಲ್‌ ಅಹ್ಮದ್‌ ದಾರ್‌ ಕುಟುಂಬಕ್ಕೆ ಸ್ಥಳೀಯರಿಂದ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಾಪೊರಾದಲ್ಲಿರುವ ಉಗ್ರ ದಾರ್‌ ನಿವಾಸಕ್ಕೆ ಸಾಲುಗಟ್ಟಿಆಗಮಿಸುತ್ತಿರುವ ಸ್ಥಳೀಯರು, ಅದಿಲ್‌ ದಾರ್‌ ಕ್ರೌರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮಗನ ಉಗ್ರ ಕೃತ್ಯಕ್ಕೆ ಅಹ್ಮದ್‌ ದಾರ್‌ ತಂದೆ ಘುಲಾಂ ಹಾಸನ್‌ ದಾರ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ‘ಇಂಡಿಯಾ ಟುಡೇ ಟೀವಿ’ ಜೊತೆ ಮಾತನಾಡಿದ ದಾರ್‌ ತಂದೆ ಘಾಲಾಂ ಹಾಸನ್‌ ದಾರ್‌ ಅವರು, ‘ಉಗ್ರರ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧರ ಬಲಿದಾನದಿಂದ ನಾವು ಹರ್ಷಗೊಂಡಿಲ್ಲ. ಕಳೆದ ಹಲವು ವರ್ಷಗಳಿಂದ ಹಿಂಸಾಚಾರಪೀಡಿತ ಕಾಶ್ಮೀರದಲ್ಲಿರುವ ನಮಗೆ ಯೋಧರ ಕಳೆದುಕೊಂಡ ಕುಟುಂಬಸ್ಥರ ನೋವನ್ನು ಅರ್ಥ ಮಾಡಿಕೊಳ್ಳುತ್ತೇವೆ,’ ಎಂದು ಹೇಳಿದ್ದಾರೆ. ಇಲ್ಲಿನ ಯುವಕರಿಗೆ ನಾನು ಯಾವುದೇ ರೀತಿಯ ಸಂದೇಶ ನೀಡಲು ಇಚ್ಛಿಸುವುದಿಲ್ಲ. ಆದರೆ, ಇದೇ ಸಂದರ್ಭದಲ್ಲಿ ಯುವಕರು ಉಗ್ರ ಸಂಘಟನೆಗಳತ್ತ ಆಕರ್ಷಣೆಯಾಗುವುದನ್ನು ತಡೆಯಲು ಹಾಗೂ ಕಾಶ್ಮೀರದ ಹಿಂಸಾಚಾರಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಇಚ್ಛಿಸುತ್ತೇನೆ ಎಂದರು.

ಕಾಣೆಯಾಗಿದ್ದ ಮಗ ಉಗ್ರನಾಗಿದ್ದ:

ಕಳೆದ ವರ್ಷ ಮಾ.18ರಂದು ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿದ್ದ. ಮಗನ ಹುಡುಕಾಟಕ್ಕಾಗಿ ನಾವು ಎಷ್ಟೋ ಪ್ರಯತ್ನ ಪಟ್ಟೆವು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಆತ ಮತ್ತೆ ಕುಟುಂಬಕ್ಕೆ ಹಿಂತಿರುಬಹುದು ಎಂಬ ಆಶಾಭಾವನೆಯಲ್ಲಿದ್ದೆವು. ಆದರೆ, ಅಷ್ಟೊತ್ತಿಗಾಗಲೇ ಅವನು ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರಿದ್ದ ಎಂದು ಹೇಳಿದ್ದಾರೆ.