ಲಿಮೋಜೆಸ್(ಅ.25): ತನ್ನ ಮೂರು ಮತ್ತು ನಾಲ್ಕು ವರ್ಷದ ಗಂಡುಮಕ್ಕಳಿಬ್ಬರಿಗೆ ಕೇವಲ ಕೋಕಾ ಕೋಲಾ ಕುಡಿಸಿದ ತಂದೆಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಸೆಂಟ್ರಲ್ ಫ್ರಾನ್ಸ್‌ನಲ್ಲಿ ನಡೆದಿದೆ.

ತಂದೆ ತನ್ನ ಸಂಪಾದನೆಯ ಹಣವನ್ನೆಲ್ಲಾ ಮದ್ಯ ಕುಡಿಯಲು ಖರ್ಚು ಮಾಡಿದ್ದು, ಮಕ್ಕಳಿಗೆ ಸೂಕ್ತ ಆಹಾರ ನೀಡದೇ ಕೇವಲ ಕೋಕಾ ಕೋಲಾ ಕುಡಿಸಿದ್ದಾರೆ ಎಂದು ಫ್ರೆಂಚ್ ವಿಕ್ಟಿಮ್ಸ್ 87 ಸಂಸ್ಥೆಯ ಪ್ರತಿನಿಧಿ ಕಾರೋಲ್ ಪಪೋನ್ ಆರೋಪಿಸಿದ್ದಾರೆ.

ವೇತನ ಪಡೆದ ಕೆಲವೇ ದಿನಗಳಲ್ಲಿ ಆ ಕುಟುಂಬಕ್ಕೆ ಕುಡಿಯಲು ಕೋಕಾ ಕೋಲಾ ಹೊರತುಪಡಿಸಿ ತಿನ್ನಲು ಬೇರೆ ಏನೂ ಇರಲಿಲ್ಲ ಎಂದು ಪಪೋನ್ ತಿಳಿಸಿದ್ದಾರೆ.

ಅಲ್ಲದೇ ಆರೋಪಿ ತನ್ನ ಹೆಂಡತಿ ಮತ್ತು ಮಕ್ಕಳ ಮೇಲೆ ಹಲ್ಲೆ ಕೂಡ ನಡೆಸಿದ್ದ ಎನ್ನಲಾಗಿದ್ದು, ಆತನಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಕ್ಕಳ ಪರ ವಕೀಲರು ಮಾಹಿತಿ ನೀಡಿದ್ದಾರೆ.