ಬೈಲಹೊಂಗಲ[ಆ.13]: ಧಾರಾಕಾರ ಮಳೆಗೆ ತುಂಬಿ ಹರಿದ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಮಗನ ಶವವನ್ನು ತಂದೆಯೇ ಹೊರತೆಗೆದ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಶನಿವಾರ ಮೇವು ತರಲು ಹೋಗಿ, ಬೆಳವಡಿ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಸಂಗೊಳ್ಳಿ- ಜಿಡ್ಡಿ ಹಳ್ಳವನ್ನು ದಾಟುವ ವೇಳೆ ಗ್ರಾಮದ ಸಂಗಮೇಶ ಬಸಪ್ಪ ಹುಂಬಿ(22) ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ಈ ಸಂಬಂಧ ಯುವಕನ ಕುಟುಂಬಸ್ಥರು ದೊಡವಾಡ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಭಾರೀ ಮಳೆಯಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯುಂಟಾಗಿತ್ತು. ಸೋಮವಾರ ಬೆಳಗ್ಗೆ ಮೃತ ಯುವಕನ ಚಿಕ್ಕಪ್ಪ ಈರಪ್ಪ ಹೊಲದ ಕಡೆ ಹೋದ ಸಂದರ್ಭದಲ್ಲಿ, ಸಂಗಮೇಶ್‌ ಕೊಚ್ಚಿಕೊಂಡು ಹೋಗಿದ್ದ ಸ್ಥಳದಿಂದ 200 ಮೀ. ದೂರದಲ್ಲಿ ಗಿಡಗಂಟಿಯೊಳಗೆ ಆತನ ಶವ ಸಿಲುಕಿರುವುದನ್ನು ನೋಡಿದ್ದಾರೆ. ತಕ್ಷಣ ಮನೆಗೆ ದೌಡಾಯಿಸಿ, ತನ್ನ ಅಣ್ಣ ಬಸಪ್ಪನಿಗೆ ಮಾಹಿತಿ ನೀಡಿದ್ದಾನೆ. ಕೊನೆಗೆ ಶವದ ಮೇಲಿದ್ದ ಬಟ್ಟೆಯ ಆಧಾರದ ಮೇಲೆ ಆತನೇ ತಮ್ಮ ಮಗನೆಂದು ಖಚಿತ ಪಡಿಸಿಕೊಂಡ ಬಸಪ್ಪ, ಹಳ್ಳಕ್ಕೆ ಇಳಿದು ತಾವೇ ಸಾಕಿ ಬೆಳೆಸಿದ ಕೈಯಿಂದ ಮಗನ ಶವ ಹೊರ ತೆಗೆದಿದ್ದಾರೆ.

ಈ ವೇಳೆ ದಡದಲ್ಲಿ ನಿಂತಿದ್ದ ಯುವಕ ಸಂಗಮೇಶನ ತಾಯಿಯ ಆಂಕ್ರದನ ಮುಗಿಲು ಮುಟ್ಟಿದ್ದು, ಸಂಬಂಧಿಕರ ದುಃಖ ಹೇಳತೀರದಾಗಿತ್ತು.