ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗುವನ್ನು ರಕ್ಷಿಸಲು ಹೋಗಿ ತಂದೆಯೇ ಪ್ರಾಣ ಕಳೆದುಕೊಂಡ ಘಟನೆ  ಮಂಡ್ಯದ ಭೀಮೇಶ್ವರ ಗ್ರಾಮದಲ್ಲಿ ನಡೆದಿದೆ. ಈಜು ಬಾರದೇ ನೀರಿಗಿಳಿದ ಕಾರಣದಿಂದ ಈ ಅವಘಡ ಸಂಭವಿಸಿದೆ. 

ಮಂಡ್ಯ : ನೀರಿನಲ್ಲಿ ಮುಳುಗುತ್ತಿದ್ದ ಒಂದು ವರ್ಷದ ಮಗುವನ್ನು ರಕ್ಷಿಸಲು ಹೋಗಿ ತಂದೆಯೇ ಪ್ರಾಣ ಕಳೆದುಕೊಂಡ ಘಟನೆ ಮಂಡ್ಯದ ಭೀಮೇಶ್ವರ ಗ್ರಾಮದಲ್ಲಿ ನಡೆದಿದೆ.

ಫೈರೋಜ್ ಅವರ ಪತ್ನಿ ಜಬೀನ್ ಕೆರೆಯಲ್ಲಿ ಬಟ್ಟೆ ತೊಳೆಯುವಾಗ ಜೊತೆಯಲ್ಲಿ ತೆರಳಿದ್ದ ಮಗು ಆಕಸ್ಮಿಕವಾಗಿ ನೀರಿಗೆ ಬಿದ್ದಿದೆ. ಈ ವೇಳೆ ಮಗುವನ್ನು ರಕ್ಷಿಸುವ ಸಲುವಾಗಿ ನೀರಿಗೆ ಹಾರಿದ ಫೈರೋಜ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. 

ಮಗುವನ್ನು ಮೇಲಕ್ಕೆತ್ತಿದ್ದ ಫೈರೋಜ್‌ ಗೆ ಈಜು ತಿಳಿದಿರದ ಕಾರಣದಿಂದ ಮೇಲಕ್ಕೆ ಬರಲಾಗದೇ ಅಲ್ಲಿಯೇ ಮೃತಪಟ್ಟಿದ್ದಾರೆ. ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಮಗುವನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಫೈರೋಜ್ ಖಾನ್ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಕ್ಕೆ ತೆಗೆದಿದ್ದಾರೆ. ಮಂಡ್ಯದ ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.