ಮೈಸೂರು(ಅ.24): ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಒಪ್ಪದ ತಂದೆ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದೆ.

ಶಿವಾಜಿ ರಸ್ತೆಯ ನಿವಾಸಿ ಮೈಸೂರು ನಗರಪಾಲಿಕೆ ಎಲೆಕ್ರ್ಟಿಕಲ್ ಗುತ್ತಿಗೆದಾರ ಮೊಕ್ತಾರ್ ಹಾಗೂ ಇವರ ಪುತ್ರ ಮೊಹಿನ್ ಅಹಮದ್ ಮೇಲೆ ರಾತ್ರಿ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಇಬ್ಬರೂ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೊಹಿನ್ ಸ್ಥಿತಿ ಚಿಂತಾಜನಕವಾಗಿದೆ.

ಈ ಘಟನೆಗೂ ಮುನ್ನ ಮೊಹಿನ್ ಮೊಬೈಲ್ ಗೆ ಯುವತಿಯೊಬ್ಬಳು ಕರೆ ಮಾಡಿದ್ದಳು ಎನ್ನಲಾಗಿದೆ.  ನಂತರ ರಾತ್ರಿ 10 ಗಂಟೆ ವೇಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

ಮೊಕ್ತಾರ್​ ಮಗ ಮೊಹಿನ್​ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ ಆದರೆ ಇದಕ್ಕೆ ಮೊಹಿನ್​ ತಂದೆ ವಿರೋಧ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಹುಡುಗಿ ಕಡೆಯವರು - ಮೊಕ್ತಾರ್​ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಇದೀಗ ಎನ್.ಆರ್. ಮೊಹಲ್ಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.