ಬೆಂಗಳೂರಿನ ಖ್ಯಾತ ಕ್ರೈಸ್ತ ಧರ್ಮಗುರು, ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಫಾ. ಆಂಬ್ರೋಸ್ ಪಿಂಟೋ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ.
ಮಂಗಳೂರು (ಜ.3): ಬೆಂಗಳೂರಿನ ಖ್ಯಾತ ಕ್ರೈಸ್ತ ಧರ್ಮಗುರು, ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಫಾ. ಆಂಬ್ರೋಸ್ ಪಿಂಟೋ (68) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಕೆಲಕಾಲದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ, ಫಾ. ಪಿಂಟೋ ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಂಡಿಯನ್ ಸೋಶಿಯಲ್ ಇನ್ಸ್ಟಿಟ್ಯೂಟ್ ದೆಹಲಿಯ ನಿರ್ದೇಶಕರಾಗಿ, ಬೆಂಗಳೂರಿನ ಸೈಂಟ್ ಜೋಸೆಫ್ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜುಗಳ ಪ್ರಾಂಶುಪಾಲರಾಗಿ ಅವರು ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಸಂಘ ಸಂಸ್ಥೆಗಳೊಂದಿಗೆ ಸೇರಿ ಬಡವ, ದಲಿತರು ಹಾಗೂ ಹಿಂದುಳಿದವರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯವರಾದ ಫಾ. ಪಿಂಟೋ, 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.
ಹಿಂದುಳಿದ ವರ್ಗಗಳ ಗುರುತಿಸುವಿಕೆಯ ತಜ್ಞ ಸಮಿತಿ ಹಾಗೂ ಸರ್ಕಾರಿ ಶಾಲೆಗಳ ಸುಧಾರಣೆ ಸಮಿತಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ನಾಳೆ ಜ.4 ಕ್ಕೆ ಬೆಂಗಳೂರಿನ ಮ್ಯೂಸಿಯಮ್ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಬಾಲಕರ ಹೈಸ್ಕೂಲಿನಲ್ಲಿ ಬೆಳಗ್ಗೆ 10.30ಕ್ಕೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬಳಿಕ ಬನ್ನೇರುಘಟ್ಟ ರಸ್ತೆಯ ಮೌಂಟ್ ಸೈಂಟ್ ಜೋಸೆಫ್’ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
