ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಫಲವಾಗಿದೆ ಎಂದು ಆಪಾದಿಸಿ, ಅಖಿಲ ಭಾರತ ಕಿಸಾನ್‌ ಸಭಾ ನೇತೃತ್ವದಲ್ಲಿ ಸುಮಾರು 30,000 ಮಂದಿ ರೈತರು ಭಾನುವಾರ ಮುಂಬೈಗೆ ಧಾವಿಸಿದ್ದಾರೆ.
ಮುಂಬೈ: ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರ ರೈತರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ವಿಫಲವಾಗಿದೆ ಎಂದು ಆಪಾದಿಸಿ, ಅಖಿಲ ಭಾರತ ಕಿಸಾನ್ ಸಭಾ ನೇತೃತ್ವದಲ್ಲಿ ಸುಮಾರು 30,000 ಮಂದಿ ರೈತರು ಭಾನುವಾರ ಮುಂಬೈಗೆ ಧಾವಿಸಿದ್ದಾರೆ.
ಸಾಲ ಮನ್ನಾ ಮತ್ತು ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ, ಸೋಮವಾರ ರೈತರು ಮಹಾರಾಷ್ಟ್ರ ವಿಧಾನಸಭೆ ಹೊರಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ. ಈ ನಡುವೆ, ಕೆಂಪು ಧ್ವಜ ಹಿಡಿದು ಪಾದಯಾತ್ರೆಯಲ್ಲಿ ಸಾಗುತ್ತಿರುವ ರೈತರ ಗುಂಪು ಮುಂಬೈ ಸಮೀಪ ವಿಖ್ರೋಲಿಗೆ ಆಗಮಿಸುತ್ತಿದ್ದಂತೆ, ಸಿಎಂ ದೇವೇಂದ್ರ ಫಡ್ನವೀಸ್, ಸಚಿವ ಗಿರೀಶ್ ಮಹಾಜನ್ರನ್ನು ಸರ್ಕಾರದ ಪ್ರತಿನಿಧಿಯಾಗಿ ರೈತ ಮುಖಂಡರ ಬಳಿ ಕಳುಹಿಸಿ, ಮಾತುಕತೆಗೆ ಯತ್ನಿಸಿದ್ದಾರೆ. ರೈತರ ಹೋರಾಟದಿಂದ ಸರ್ಕಾರ ಚಿಂತಿತವಾದಂತಿದೆ.
ರೈತರಿಗೆ ನೀಡಿರುವ ಭರವಸೆಗಳನ್ನು ಸರ್ಕಾರ ಈಡೇರಿಸಿಲ್ಲ, ಹೀಗಾಗಿ ಈ ರೈತರು ಸರ್ಕಾರದಿಂದ ಉತ್ತರ ಬಯಸಿದ್ದಾರೆ ಎಂದು ಎಐಕೆಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ನವಾಲೆ ಹೇಳಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್, ಶಿವಸೇನೆ, ಎಂಎನ್ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ರೈತರ ಈ ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದಾರೆ.
ಸುಮಾರು 12,000 ರೈತರು 180 ಕಿ.ಮೀ. ದೂರದ ವರೆಗೆ ಬೃಹತ್ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಿದ್ದರು. ಆದರೆ, ಈಗ ಈ ಮೆರವಣಿಗೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಾದಯಾತ್ರೆಯಲ್ಲಿ ಸುಮಾರು 30,000 ರೈತರು ಭಾಗವಹಿಸಿದ್ದಾರೆ. ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಇನ್ನಷ್ಟುರೈತರು ಧಾವಿಸಲಿದ್ದು, ಅದು 55,000-60,000ರಷ್ಟುಆಗಬಹುದು ಎಂದು ನವಾಲೆ ತಿಳಿಸಿದ್ದಾರೆ.
ಬೇಡಿಕೆ ಏನು?:
ರೈತರ ಸಾಲಮನ್ನಾ, ಉತ್ಪನ್ನಕ್ಕೆ ಬೆಂಬಲ ಬೆಲೆ, ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ, ಅರಣ್ಯ ಹಕ್ಕುಗಳ ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಆಗ್ರಹಿಸಿ ಈ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ. ಕಳೆದ ವರ್ಷದ ಜೂನ್ನಲ್ಲಿ ಇಂತಹುದೇ ಪ್ರತಿಭಟನೆ ನಡೆದಿದ್ದು, ಆ ವೇಳೆ ಫಡ್ನವಿಸ್ ಸರ್ಕಾರಕ್ಕೆ 34,000 ಕೋಟಿ ರು. ಸಾಲಮನ್ನಾ ಘೋಷಿಸುವುದು ಅನಿವಾರ್ಯವಾಗಿತ್ತು. ಆದರೆ, ಅದನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಆಪಾದಿಸಲಾಗಿದೆ.
