ಮುಂಬೈ: ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ, ಅಲ್ಲಿನ ರೈತ ಸಂಘಟನೆಗಳು ಭಾರೀ ಪ್ರತಿಭಟನೆಗೆ ಮುಂದಾಗಿವೆ. ಈಗಾಗಲೇ ಮಂಗಳವಾರ ನಾಸಿಕ್‌ನಿಂದ ಆರಂಭಗೊಂಡಿರುವ ರೈತರ ಪಾದಯಾತ್ರೆ, ಸೋಮವಾರ ಮುಂಬೈಯಲ್ಲಿ ಸಮಾಪನಗೊಳ್ಳಲಿದ್ದು, ರಾಜ್ಯ ವಿಧಾನಸಭೆಯಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆ ದಿನ ವಿಧಾನಭವನಕ್ಕೆ ಮುತ್ತಿಗೆ ಹಾಕುವ ಸಿದ್ಧತೆ ನಡೆದಿದೆ.

ಅಖಿಲ ಭಾರತ ಕಿಸಾನ್‌ ಸಭಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತಿದ್ದು, ಈಗಾಗಲೇ ಭಾರೀ ಸಂಖ್ಯೆಯ ರೈತರ ಬೆಂಬಲ ದೊರಕಿದೆ. ರೈತರ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯವನ್ನು ವಿರೋಧಿಸಿ, ರೈತರ ಸಾಲ ಮನ್ನಾ, ಉತ್ಪನ್ನಕ್ಕೆ ಬೆಂಬಲ ಬೆಲೆ, ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸು ಜಾರಿ, ಅರಣ್ಯ ಹಕ್ಕುಗಳ ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಯಾತ್ರೆ ನಡೆಯುತ್ತಿದೆ.

ಇದೇ ವೇಳೆ ಶನಿವಾರ ಠಾಣೆ ಜಿಲ್ಲೆಗೆ ಪ್ರವೇಶಿಸಿದ ಯಾತ್ರೆಯಲ್ಲಿ ಶಿವಸೇನೆಯ ಹಿರಿಯ ನಾಯಕ, ಪಿಡಡಬ್ಲ್ಯೂಡಿ ಸಚಿವ ಏಕನಾಥ ಶಿಂಧೆ ಭಾಗವಹಿಸಿ ಬೆಂಬಲ ಸೂಚಿಸಿದ್ದಾರೆ. ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಆಪ್ತ ಅಭಿಜಿತ್‌ ಜಾಧವ್‌ ಕೂಡ ತಮ್ಮನ್ನು ಭೇಟಿಯಾಗಿದ್ದು, ಎಂಎನ್‌ಎಸ್‌ ಕೂಡ ಬೆಂಬಲಿಸಲಿದೆ ಎಂದು ನವಾಲೆ ತಿಳಿಸಿದ್ದಾರೆ.