ಬೆಂಗಳೂರು (ಮಾ. 07):  ರೈತರಿಗೆ ‘ಕೃಷಿ ಪಂಡಿತ’ ಹಾಗೂ ‘ಕೃಷಿ ಪ್ರಶಸ್ತಿ’ ಪ್ರದಾನ ಮಾಡಲು ಬಾರದೆ ಗೈರಾಗಲು ಯತ್ನಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಆಗ​ಮಿ​ಸಿದ ಕುಮಾರಸ್ವಾಮಿ, ರೈತರ ಬಹಿರಂಗ ಕ್ಷಮೆ ಯಾಚಿಸಿದ ಪ್ರಸಂಗ ನಡೆಯಿತು.

ಕೃಷಿ ಇಲಾಖೆಯ ಕೃಷಿ ಪಂಡಿತ ಹಾಗೂ ಕೃಷಿ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮವನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಲಾಗಿತ್ತು. ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ಮುಖ್ಯಮಂತ್ರಿಗಳೇ ವಿತರಿಸುವುದು ವಾಡಿಕೆಯಾಗಿರುವುದರಿಂದ ಈ ವರ್ಷವೂ ಪ್ರಶಸ್ತಿ ಪ್ರದಾನಕ್ಕೆ ಬರುವುದಾಗಿ ಮುಖ್ಯಮಂತ್ರಿಗಳು ಒಪ್ಪಿದ್ದರು. ಆದರೆ, ಕಾರ್ಯಕ್ರಮ ಶುರುವಾದ ಬಳಿಕ ಸಿಎಂ ಬರುವುದಿಲ್ಲ ಎಂಬ ಸುದ್ದಿ ಬಂತು.

ಬೆಳಗ್ಗೆ 11.30ಕ್ಕೆ ಆರಂಭವಾಗಬೇಕಾಗಿದ್ದ ಕಾರ್ಯಕ್ರಮ ಮುಖ್ಯಮಂತ್ರಿಗಳ ನಿರೀಕ್ಷೆಯಲ್ಲಿ ಒಂದು ತಾಸು ತಡವಾಗಿ ಆರಂಭವಾಯಿತು. ನಂತರ ಮಧ್ಯಾಹ್ನ 1 ಗಂಟೆಯಾಗುತ್ತಿದ್ದರೂ ಕುಮಾರಸ್ವಾಮಿ ಬಾರದ ಹಿನ್ನೆಲೆಯಲ್ಲಿ ರೈತರ ಆಕ್ರೋಶ ಕಟ್ಟೆಯೊಡೆಯಿತು. ಈ ವೇಳೆ ಮುಖ್ಯಮಂತ್ರಿಗಳ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಶಸ್ತಿ ಸಿಎಂ ಅವರೇ ವಿತರಿಸಬೇಕು. ಕಾಟಾಚಾರಕ್ಕೆ ವಿತರಿಸುವ ಈ ಪ್ರಶಸ್ತಿ ನಮಗೆ ಬೇಡ. ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಅವರಿಗೆ ರೈತರಿಗಿಂತ ರಾಜಕೀಯವೇ ಹೆಚ್ಚಾಯಿತೇ? ನಮಗಾಗಿ ಎರಡು ನಿಮಿಷವೂ ಅವರಿಗೆ ಸಮಯ ಕೊಡಲು ಸಾಧ್ಯವಿಲ್ಲವೇ ಎಂದು ಹರಿಹಾಯ್ದರು. ಈ ವೇಳೆ ರೈತರನ್ನು ಸಮಾಧಾನಪಡಿಸಲು ಕೃಷಿ ಸಚಿವರು ಯತ್ನಿಸಿದರೂ ಫಲ ನೀಡಲಿಲ್ಲ. ಹೀಗಾಗಿ ಕೊನೆಗೆ ಅಧಿಕಾರಿಗಳು ದೂರವಾಣಿ ಮೂಲಕ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿ, ಬರಲೇಬೇಕಾದ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟರು.

ಎದ್ದೆನೋ ಬಿದ್ದೆನೋ ಅಂತ ಬಂದೆ:

ಇದರ ಬೆನ್ನಲ್ಲೇ 1.20ಕ್ಕೆ ವಿಧಾನಸೌಧಕ್ಕೆ ಧಾವಿಸಿದ ಮುಖ್ಯಮಂತ್ರಿ, ರೈತರ ಬಹಿರಂಗ ಕ್ಷಮೆಯಾಚಿಸಿ, ಕಾರ್ಯದ ಒತ್ತಡದ ಬಗ್ಗೆ ಸಮಜಾಯಿಷಿ ನೀಡಿದರು. ನಂತರ ಪ್ರಶಸ್ತಿ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಪ್ರಶಸ್ತಿ ಪಡೆಯುವುದಿಲ್ಲ ಎಂದು ಹಟ ಹಿಡಿದಿದ್ದಾರೆ ಎಂಬ ಮಾಹಿತಿ ಬಂತು. ಹೆದರಿ ಓಡಿ ಬಂದೆ. 'ಎಲ್ಲಿಯ ಗ್ರಹಚಾರ.  ಕುಮಾರಸ್ವಾಮಿ ರೈತರಿಗೆ ಅವಮಾನ ಮಾಡಿದರು ಎಂದು ಮಾಧ್ಯಮದವರು ಬರೆಯುತ್ತಾರೆ. ಹೀಗಾಗಿ ಎದ್ದೆನೋ ಬಿದ್ದೆನೋ ಎಂದು ಓಡೋಡಿ ಬಂದೆ. ನನಗೆ ಇಪ್ಪತ್ನಾಲ್ಕು ಗಂಟೆ ನಿಮ್ಮ ಬಗ್ಗೆಯೇ ಚಿಂತೆ' ಎಂದು ಹೇಳಿದರು.

ಅನ್ನದಾತನಿಗೆ ಊಟವಿಲ್ಲ:

ಕಾರ್ಯಕ್ರಮದಲ್ಲಿ ರೈತರಿಗೆ ಸೂಕ್ತ ಊಟದ ವ್ಯವಸ್ಥೆ ಮಾಡಿರಲಿಲ್ಲ. ಕೊನೆಯಲ್ಲಿ ಕೆಲವು ರೈತರಿಗೆ ಊಟ ಸಿಗದ ಹಿನ್ನೆಲೆಯಲ್ಲಿ ರೈತರು ಆಯೋಜಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಾತ್ರೆ ಎಸೆದು ಅಸಮಾಧಾನವನ್ನೂ ವ್ಯಕ್ತಪಡಿಸಿದರು.