ಇಲ್ಲೊಬ್ಬ ರೈತ ತಾನು ಪಡೆದ ಸಾಲಕ್ಕೆ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದ್ರೂ ಸಹ, ತಮಿಳುನಾಡಿನ ಪೈನಾನ್ಸ್ ಕಂಪನಿಯೊಂದು ಆತನ ಮೇಲೆ ಕೇಸ್ ಹಾಕಿದೆ. ಬಂಧನ ಬೀತಿಯಿಂದಾಗಿ ಕಂಗೆಟ್ಟಿರೋ ಅನ್ನದಾತ ಇದೀಗ ಹಾಸಿಗೆ ಹಿಡಿದಿದ್ದಾನೆ.
ಬಾಗಲಕೋಟೆ(ಸೆ.23): ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ಅಮೀನಸಾಬ ಬಡೇಖಾನ್ ಎಂಬ ಈ ರೈತ, ಬಾಗಲಕೋಟೆ ನಗರದಲ್ಲಿರೋ ತಮಿಳುನಾಡು ಮೂಲದ ಚೋಳಮಂಡಳಂ ಪೈನಾನ್ಸ್ ಕಂಪನಿಯಲ್ಲಿ 2012ರಲ್ಲಿ ಟ್ರ್ಯಾಕ್ಟರ್ ಖರೀದಿಗೆ ಅಂತ ಸಾಲ ಮಾಡಿದ್ದ. ಅದನ್ನ ಸಮಯಕ್ಕೆ ಸರಿಯಾಗಿ ಪಾವತಿಯೂ ಮಾಡಿದ್ದ. ಆದ್ರೆ ಫೈನಾನ್ಸ್ ನವ್ರು ಸಾಲ ಮರುಪಾವತಿಯಾಗಿಲ್ಲ ಅಂತ ರೈತನ ಮೇಲೆ ಕೇಸ್ ಹಾಕಿದ್ದಾರೆ. ಇದರಿಂದಾಗಿ ಕಂಗಾಲಾದ ರೈತ ಅಮೀನಸಾಬ್ ಹಾಸಿಗೆ ಹಿಡಿದಿದ್ದಾನೆ.
ಈ ಮಧ್ಯೆ ಕಚೇರಿಗೆ ತೆರಳಿದ ರೈತನ ಕುಟುಂಬ, ಸಮರ್ಪಕ ಉತ್ತರ ನೀಡದ ಕಂಪನಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತ್ರ ರೈತ ಸಾಲ ತುಂಬಿದ ಬಗ್ಗೆ ಮಾಹಿತಿ ಖಚಿತಪಡಿಸಿದ್ದಾರೆ. ಆದ್ರೆ ಮೇಲಧಿಕಾರಿಗಳ ಎಡವಟ್ಟಿನ ಪರಿಣಾಮ ರೈತನಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ರೈತನಿಗೆ ನ್ಯಾಯ ಸಿಗಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಹೊರರಾಜ್ಯದ ಪೈನಾನ್ಸ್ ಕಂಪನಿಯೊಂದರ ಅವಾಂತರಕ್ಕೆ ರಾಜ್ಯದ ಅನ್ನದಾತನೊಬ್ಬ ಹಾಸಿಗೆ ಹಿಡಿದಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾನೆ.
