ಭೂಪಾಲ್ (ಜ.03): ಮಧ್ಯಪ್ರದೇಶದಲ್ಲಿ ರೈತನೊಬ್ಬ ಶಿವಪುರ ಜಿಲ್ಲಾಧಿಕಾರಿಯ ಕಾಲಿಗೆ ಎರಗುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆತ ವಿದ್ಯುತ್ ಬಿಲ್ ಪಾವತಿಸಿದ್ದರೂ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದರಿಂದ ಸಹಾಯಕ್ಕಾಗಿ ಜಿಲ್ಲಾಧಿಕಾರಿಯ ಕಾಲಿಗೆ ಎರಗಬೇಕಾದ ದಯನೀಯ ಪರಿಸ್ಥಿತಿ ಬಂದೊದಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಹಿಂದಿಯ ಎಬಿಪಿ ನ್ಯೂಸ್ ಕೂಡ ಈ ಸುದ್ದಿಯನ್ನು ಪ್ರಸಾರ ಮಾಡಿತ್ತು. ಮಧ್ಯ ಪ್ರದೇಶದಲ್ಲಿ ರೈತ ಜಿಲ್ಲಾಧಿಕಾರಿಯ ಕಾಲಿಗೆ ಎರಗಿದ್ದಾನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವರದಿಯನ್ನು ೫ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ 20.000 ಮಂದಿ ಈ ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಹೀಗಾಗಿ ಈ ಸುದ್ದಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಜಿಲ್ಲಾಧಿಕಾರಿ ಕಾರು ಹತ್ತಲು ಬರುತ್ತಿದ್ದಂತೆ ರೈತ ಆಕೆಯ ಕಾಲಿಗೆ ಎರಗಿ ತನ್ನ ಕೋರಿಕೆ ಸಲ್ಲಿಸುತ್ತಾನೆ.

ಆದರೂ ಆತನ ಅಹವಾಲನ್ನು ಆಲಿಸದೇ ಜಿಲ್ಲಾಧಿಕಾರಿ ಕಾರು ಹತ್ತಿ ಹೋಗುತ್ತಾರೆ ಎಂದು ವೈರಲ್ ಆಗಿರುವ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಇದು ಮೇಲ್ನೋಟಕ್ಕೆ ಕಂಡುಬಂದ ಸಂಗತಿಯಾಗಿದ್ದು, ನಿಜ ಸಂಗತಿಯೇ ಬೇರೆಯಾಗಿದೆ. ತನ್ನ ಊರಿಗೆ ಟ್ರಾನ್ಸ್‌ಫಾರ್ಮರ್ ಅಳವಡಿಸುವ ಸಲುವಾಗಿ ತಕ್ಷಣವೇ ಮಧ್ಯಪ್ರವೇಶಿಸುವಂತೆ ರೈತ ಅಜಿತಾ ಸಿಂಗ್ ಎಂಬಾತ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದ್ದ. ಆತನ ಅಹವಾಲನ್ನು ಮನ್ನಿಸಿದ ನೂತನ ಜಿಲ್ಲಾಧಿಕಾರಿ ಸಂಬಂಧಿಸಿದ ಅಧಿಕಾರಿಗೆ ಕ್ರಮ ಕೈಗೊಳ್ಳುಂತೆ ಸೂಚಿಸಿದ್ದರು. ಒಂದು ದಿನದಲ್ಲೇ ಟ್ರಾನ್ಸ್ಫಾರ್ಮರ್ ಕೂಡ ಅಳವಡಿಸಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗಳು ಸಹ ಸಷ್ಟನೆ ನೀಡಿದ್ದು, ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಹೀಗಾಗಿ ರೈತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದಾಗಿ ಜಿಲ್ಲಾಧಿಕಾರಿಯ ಕಾಲಿಗೆ ಎರಗಿದ್ದಾನೆ ಎಂಬ ಸುದ್ದಿ ಸತ್ಯವಲ್ಲ.

-ವೈರಲ್ ಚೆಕ್