Asianet Suvarna News Asianet Suvarna News

ಈ ನಿರ್ಧಾರ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿದೆ: ಸಿಎಂ

ತಾವು ತೆಗೆದುಕೊಂಡ ನಿರ್ಣಯ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ರೈತರ ಸಾಲಮನ್ನಾ ನಿರ್ಣಯ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ವಿತ್ತ ಸಚಿವನೂ ಆಗಿರುವುದರಿಂದ ಸಾಲಮನ್ನಾದಿಂದ ಆಗುವ ಹಣಕಾಸಿನ ಹೊರೆಯನ್ನು ಸರಿದೂಗಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Farm Loan Waiving Decision Is The Big Challenge For Me Said HD Kumaraswamy
Author
Bengaluru, First Published Oct 4, 2018, 10:31 AM IST

ರಾಮನಗರ :  ರೈತರ ಸಾಲಮನ್ನಾ ನಿರ್ಣಯ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ವಿತ್ತ ಸಚಿವನೂ ಆಗಿರುವುದರಿಂದ ಸಾಲಮನ್ನಾದಿಂದ ಆಗುವ ಹಣಕಾಸಿನ ಹೊರೆಯನ್ನು ಸರಿದೂಗಿಸುವುದು ಸವಾಲಾಗಿ ಪರಿಣಮಿಸಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ತಾಲೂಕಿನ ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟದ ಮನೆ ಆವರಣದಲ್ಲಿ ಬುಧವಾರ ನಡೆದ ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ನಾಡಿನ 44 ಲಕ್ಷ ಕುಟುಂಬಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ರೈತರನ್ನು ಸಂಕಷ್ಟದಿಂದ ಪಾರು ಮಾಡುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದರು.

ಅಭ್ಯರ್ಥಿ ಆಯ್ಕೆಗೆ ಸಭೆ ಅಲ್ಲ:

ಆಡಳಿತದ ಒತ್ತಡದಲ್ಲಿ ಕಾರ್ಯಕರ್ತರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಕಾರ್ಯಕರ್ತರ ಕುಂದು ಕೊರತೆಗಳನ್ನು ಆಲಿಸಲು ಸಭೆ ಕರೆಯಲಾಗಿದೆಯೇ ಹೊರತು ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಭೆಯಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಕಾರ್ಯಕರ್ತರ ಅಸಮಾಧಾನ

ರಾಮನಗರ ಕ್ಷೇತ್ರ ಉಪ ಚುನಾವಣೆಯ ಹೊಸ್ತಿಲಲ್ಲಿ ಕುಮಾರಸ್ವಾಮಿ ಕರೆದಿದ್ದ ಸಭೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಕಾರ್ಯಕರ್ತರಿಂದ ತೀವ್ರ ಬೇಸರ, ಅಸಮಾಧಾನ ವ್ಯಕ್ತವಾಯಿತು. ಮುಖ್ಯಮಂತ್ರಿಯಾದ ಬಳಿಕ ಈ ಕ್ಷೇತ್ರಗಳ ಕಾರ್ಯಕರ್ತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎನ್ನುವ ಅಸಮಾಧಾನವನ್ನು ಕಾರ್ಯಕರ್ತರು, ಮುಖಂಡರು ಹೊರಹಾಕಿದರು. ಸುಮಾರು 3 ಗಂಟೆಯಷ್ಟುಸುದೀರ್ಘವಾಗಿ ನಡೆದ ಈ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ ಪ್ರಯತ್ನ ಮಾಡಿದರು. ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರ ವರ್ತನೆಗೆ ಗರಂ ಆದ ಮುಖ್ಯಮಂತ್ರಿ ಅಂಥವರನ್ನು ಹೊರ ಹಾಕಿ ಎಂದು ಪೊಲೀಸರಿಗೆ ಸೂಚನೆಯನ್ನೂ ನೀಡಿದರು.

Follow Us:
Download App:
  • android
  • ios