Asianet Suvarna News Asianet Suvarna News

ಕನ್ನಡದ ಖ್ಯಾತ ನಟನ ಪುತ್ರ ಈಗ ಉಬರ್ ಡ್ರೈವರ್ ! ತಮ್ಮ ಕೆಲಸದ ಬಗ್ಗೆ ಈ ನಟ ಏನಾಂತರೆ ಗೊತ್ತಾ ?

ಕನ್ನಡ ಚಿತ್ರರಂಗದ ಚಾಮಯ್ಯ ಮೇಷ್ಟ್ರು ದಿವಂಗತ ಕೆ.ಎಸ್.ಅಶ್ವಥ್ ಅವರ ಮಗ ಶಂಕರ್ ಅಶ್ವಥ್‌ಗೆ ಚಿತ್ರರಂಗದಲ್ಲಿ ಅವಕಾಶಗಳ ಕೊರತೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟ ಪರಿಹಾರಕ್ಕಾಗಿ ಬೆಂಗಳೂರಿನಲ್ಲಿ ಉಬರ್ ಕ್ಯಾಬ್ ಚಾಲಕರಾಗಿ ವೃತ್ತಿ ಆರಂಭಿಸಿದ್ದಾರೆ. ತಾವು ಮಾಡುತ್ತಿರುವ ಕೆಲಸದ ಬಗ್ಗೆ ಅವರಿಗೆ ಹೆಮ್ಮೆ ಇದ್ದು, ಯಾವ ಕೆಲಸವನ್ನೂ ತುಚ್ಛವಾಗಿ ಕಾರಣಬೇಡಿ ಎನ್ನುತ್ತಾರೆ.

Famous Actor Son Now Uber Driver

ಬೆಂಗಳೂರು(ಡಿ.30): ತಮ್ಮ ಮನೋಜ್ಞ ಅಭಿನಯದ ಮೂಲಕವೇ ಕನ್ನಡಿಗರ ಮನೆ-ಮನಗಳನ್ನು ಗೆದ್ದಿದ್ದ ಚಾರಿತ್ರಿಕ ನಟ ಕೆ.ಎಸ್.ಅಶ್ವಥ್. ಇಂತಹ ತಂದೆಗೆ ತಕ್ಕ ಮಗನಾಗಿ ಕಳೆದ ಎರಡೂವರೆ ದಶಕಗಳಿಂದ ಬೆಳ್ಳಿತೆರೆ ಹಾಗೂ ಕಿರುತೆರೆಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಅಶ್ವಥ್ ಪುತ್ರ ಶಂಕರ್ ಅಶ್ವಥ್.

ದುರಂತವೆಂದರೆ, ಅದ್ಭುತ ನಟನ ಪ್ರತಿಭಾವಂತ ಪುತ್ರ ಶಂಕರ್ ಅಶ್ವಥ್ ಇದೀಗ ಬೆಂಗಳೂರಿನಲ್ಲಿ ಉಬರ್ ಕ್ಯಾಬ್ ಚಾಲಕ! ಹೌದು, ಶಂಕರ್ ಅಶ್ವಥ್ ಕಿರುತೆರೆ ಅಥವಾ ಬೆಳ್ಳಿ ತೆರೆಯಲ್ಲಿ ಅಷ್ಟೇನೂ ಅವಕಾಶ ದೊರೆಯದ ಕಾರಣ ತಮ್ಮ ಜೀವನ ನಿರ್ವಹಣೆಗಾಗಿ ಕ್ಯಾಬ್ ಚಾಲಕರಾಗಿದ್ದಾರೆ. ಕನ್ನಡದ ಕಿರುತೆರೆಯಲ್ಲಿ ಮಿಂಚುತ್ತಿದ್ದ ಶಂಕರ್ ಇದ್ದಕ್ಕಿದ್ದಂತೆಯೇ ಚಾಲಕರಾಗಲು ಕಾರಣವೇನು ಎಂದು ಕೇಳಿದರೆ, ಅವಕಾಶಗಳೇ ಇಲ್ಲ ಅಂತೇನೂ ಇಲ್ಲ. ಆದರೆ ಸಿಗುವ ಅವಕಾಶಗಳಿಂದ ಬದುಕು ಸಾಗಿಸುವುದು ಕಷ್ಟ. ಚಿತ್ರೀಕರಣದಲ್ಲಿರುವ ದಿನಗಳಿಗಿಂತ ಕೆಲಸವಿಲ್ಲದೆ ಇರುವ ದಿನಗಳೇ ಹೆಚ್ಚು. ಸಿನಿಮಾ ಮಾಧ್ಯಮ ವಿಸ್ತಾರವಾಗಿದ್ದರೂ ಅದು ಜನರೇಷನ್ ಗ್ಯಾಪ್‌ನಿಂದಲೋ ಏನೋ ನನ್ನಂತಹವರಿಗೆ ಅವಕಾಶಗಳು ಸಿಗುತ್ತಿಲ್ಲ.

ಹಾಗೆಂದು ಸಿನಿಮಾ ರಂಗವನ್ನು ದೂಷಿಸಲು ನಾನು ಸಿದ್ಧವಿಲ್ಲ. ನಮ್ಮ ತಂದೆ ನನಗೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿಕೊಟ್ಟಿದ್ದಾರೆ. ಯಾವತ್ತೂ ಯಾರ ಮುಂದೆಯೂ ಅವಕಾಶಕ್ಕಾಗಿಯಾಗಲೀ ಹಣಕ್ಕಾಗಲೀ ಕೈಚಾಚಿ ನಿಲ್ಲುವ ಸ್ವಭಾವ ನಮ್ಮ ಕುಟುಂಬದ್ದಲ್ಲ ಎನ್ನುತ್ತಾರೆ ಶಂಕರ್ ಅಶ್ವಥ್. ಕಾಲಾವಕಾಶವಿದ್ದಾಗ ದುಡಿಯಬೇಕು. ವಯಸ್ಸಾಗುವಾಗ ಆರೋಗ್ಯ ಕೆಟ್ಟು ಹೋಗುವ ಸಂದರ್ಭ ಬರುತ್ತದೆ. ಅದಕ್ಕೆ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ಸಾಕಷ್ಟು ದುಡಿದು ಇಟ್ಟುಕೊಳ್ಳಬೇಕು.

ನಾವು ಮಧ್ಯಮ ವರ್ಗದವರು. ಹೀಗಾಗಿ ನನಗೆ ಹೆಚ್ಚು ಬೇಡಿಕೆ ಇಲ್ಲದಿದ್ದಾಗ ಅಥವಾ ನನಗೆ ಕಾಲಾವಕಾಶ ಇದ್ದಾಗ ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಏನು ಮಾಡಲಿ? ಈ ವೇಳೆ ಉಬರ್ ಕ್ಯಾಬ್  ಓಡಿಸಿಕೊಂಡು ಒಂದಷ್ಟು ದುಡಿಯಬಹುದು ಅನ್ನಿಸಿದ್ದರಿಂದ ಕ್ಯಾಬ್ ಚಾಲಕನಾಗಿದ್ದೇನೆ ಎನ್ನುವ ಶಂಕರ್ ಅವರಿಗೆ ನಾನೊಬ್ಬ ಕನ್ನಡ ಚಿತ್ರರಂಗದ ದೊಡ್ಡ ಕಲಾವಿದನ ಮಗನೆನ್ನುವ ಅಹಂಕಾರ ಎಳ್ಳಷ್ಟೂ ಇಲ್ಲ. ಶ್ರಾದ್ಧದ ಖರ್ಚಿಗೂ ಹಣವಿರಲಿಲ್ಲ!: ಜ.19ಕ್ಕೆ ನನ್ನ ತಂದೆ ಕೆ.ಎಸ್.ಅಶ್ವಥ್ ಅವರ 8ನೇ ವರ್ಷದ ಶ್ರಾದ್ಧವಿದೆ.

ನಮ್ಮ ಪದ್ಧತಿ ಪ್ರಕಾರ ಈ ಕಾರ್ಯ ಮಾಡುವಾಗ ಯಾವುದೇ ಸಾಲ ಮಾಡಬಾರದು. ಯಾವುದನ್ನೂ ಮಾರಿ ಕಾರ್ಯ ಮಾಡುವಂತಿಲ್ಲ. ಕಷ್ಟಪಟ್ಟು ದುಡಿದು, ಅದನ್ನು ಶೇಖರಿಸಿ ಆ ಕಾರ್ಯ ಮಾಡಬೇಕು. ಒಂದೂವರೆ ತಿಂಗಳಿನಿಂದ ಯಾವುದೇ ಸಂಪಾದನೆ ಇಲ್ಲದೆ ಮನೆಯಲ್ಲೇ ಕುಳಿತಿದ್ದೆ. ನಮ್ಮಪ್ಪನ ಕಾರ್ಯ ಹೇಗೆ ಮಾಡಲಿ ಎಂಬ ಚಿಂತೆ. ಅಷ್ಟೋ ಇಷ್ಟೋ ಬರುತ್ತೆ, ಆದರೆ ಶ್ರಾದ್ಧ ಮಾಡುವಷ್ಟು ಖರ್ಚು ಹೊಂದಿಸಲು ಆಗಲ್ಲವಲ್ಲ ಎಂಬ ಕೊರಗಿತ್ತು. ಈ ವೇಳೆ ಉಬರ್ ಕ್ಯಾಬ್ ಓಡಿಸಲು ನಿರ್ಧರಿಸಿ, ಅಪ್ಪನ ಫೋಟೋ ಮುಂದೆ ನಿಂತು ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಕೈಮುಗಿದು ಕೆಲಸ ಪ್ರಾರಂಭ ಮಾಡಿದೆ ಎನ್ನುತ್ತಾರೆ ಶಂಕರ್ ಅಶ್ವಥ್.

ಮರ್ಯಾದೆಯಿಂದ, ಹೆಮ್ಮೆಯಿಂದ, ಧೈರ್ಯ'ವಾಗಿ ಈ ಕೆಲಸ ಮಾಡುತ್ತಿದ್ದೇನೆ. ಯಾವ ಕೆಲಸವನ್ನೂ ತುಚ್ಛವಾಗಿ ಕಾಣಬೇಡಿ. ಉಬರ್ ಕ್ಯಾಬ್ ಸೇವೆಯಿಂದ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಮಸ್ಯೆ ನೀಗಿದೆ.

- ಶಂಕರ್ ಅಶ್ವಥ್

ಅಭಿಮಾನಿಯ ಕಾಕತಾಳೀಯ ನೆರವು: ನನ್ನ ಪ್ರಾರ್ಥನೆ ಅಪ್ಪನಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ನನ್ನ ಜೀವನದ ೨ನೇ ಉಬರ್ ಕ್ಯಾಬ್ ರೈಡ್‌ಗೆ ಹೋಗಿದ್ದೆ. ಎಚ್‌ಎಸ್ ಆರ್ ಲೇಔಟ್‌ನಿಂದ ಪಿಕಪ್ ಮಾಡಿ ಬೆಳ್ಳಂದೂರಿನ ಟೆಕ್‌ಪಾರ್ಕ್‌ಗೆ ಡ್ರಾಪ್ ಮಾಡಬೇಕಿತ್ತು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅರ್ಪಿತಾ ಅವರು ಕ್ಯಾಬ್ ಹತ್ತಿದ್ದರು. ನನ್ನನ್ನು ನೋಡಿ ಅನುಮಾನದಲ್ಲಿಯೇ ನೀವು ಶಂಕರ್ ಅಶ್ವಥ್ ಅಲ್ವಾ ಎಂದು ಕೇಳಿದರು. ಹೌದು ಎಂದಾಗ, ನನಗೆ ಅಶ್ವಥ್ ಎಂದರೆ ತುಂಬಾ ಇಷ್ಟ. ಅವರ ನಟನೆ ನೋಡಿಕೊಂಡೇ ಬೆಳೆದಿದ್ದೇವೆ ಎಂದೆಲ್ಲಾ ಹೇಳಿದರು.

ಅವರು ಇಳಿಯುವ ಸ್ಥಳ ಬಂದಾಗ ಕ್ಯಾಬ್ ಬಿಲ್ ನೂರು ಚಿಲ್ಲರೆ ತೋರಿಸುತ್ತಿತ್ತು. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಅವರು 500 ರು. ನೋಟು ಕೊಟ್ಟರು. ಮತ್ತೆ ಭೇಟಿ ಮಾಡುತ್ತೇವೋ ಇಲ್ಲವೋ ಗೊತ್ತಿಲ್ಲ. ತುಂಬಾ ಮಾತನಾಡಬೇಕು ಅನ್ನಿಸುತ್ತಿದೆ. ಆದರೆ ಟೈಮ್ ಇಲ್ಲ, ಬೇಡ ಎನ್ನದೆ ಈ ಹಣ ಇಟ್ಟುಕೊಳ್ಳಿ. ನಿಮ್ಮ ತಂದೆ ಹೆಸರು ಹೇಳಿ ಏನಾದರೂ ಮಾಡುವುದಿದ್ದರೆ ಮಾಡಿ ಸಾರ್ ಎಂದು ಕೊಟ್ಟು ಹೊರಟುಹೋದರು. ಅಲ್ಲಿಂದ ಹೊರಬಂದು ನೋಡಿದರೆ ಅದರಲ್ಲಿ ಎರಡು 500ರ ನೋಟು ಇದ್ದದ್ದು ಗೊತ್ತಾಯಿತು. ಇದೇ ಅಲ್ಲವೇ ಕಾಕತಾಳೀಯ.

ಇದನ್ನು ಎಂದಿಗೂ ಮರೆಯಲು  ಸಾಧ್ಯವಿಲ್ಲ ಎಂದು ಸ್ಮರಿಸಿದರು. ಮರ್ಯಾದೆಯಿಂದ, ಹೆಮ್ಮೆಯಿಂದ, ಧೈರ್ಯವಾಗಿ ಈ ಕೆಲಸ ಮಾಡುತ್ತಿದ್ದೇನೆ. ಯಾವ ಕೆಲಸವನ್ನೂ ತುಚ್ಛವಾಗಿ ಕಾಣಬೇಡಿ. ಚೆನ್ನಾಗಿರುವ ಉಡುಗೆ-ತೊಡುಗೆ ಹಾಕಿಕೊಂಡು ಬಂದರೆ ಮಾತ್ರ ಮರ್ಯಾದೆ ಸಿಗುತ್ತದೆ ಎನ್ನುವುದು ತಪ್ಪು. ಸರಳತೆಯೇ ಶ್ರೇಷ್ಠತೆ. ನಮಗೆ ಏನು ಸಿಗಬೇಕೋ ಅದನ್ನು ಭಗವಂತ ಕೊಡುತ್ತಾನೆ. ಉಬರ್ ಕ್ಯಾಬ್ ಸೇವೆಯಿಂದ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಮಸ್ಯೆ  ನೀಗಿದೆ ಎನ್ನುತ್ತಾರೆ ಶಂಕರ್ ಅಶ್ವಥ್.

Follow Us:
Download App:
  • android
  • ios