ಸಾಹಸ ನಿರ್ದೇಶಕ ರವಿ ವರ್ಮಾ ಸೇರಿದಂತೆ ಚಿತ್ರರಂಗದ ಎಲ್ಲ ಸ್ನೇಹಿತರನ್ನೂ ಅಂತ್ಯಸಂಸ್ಕಾರಕ್ಕೆ ಆಗಮಿಸಲು ಉದಯ್ ತಂದೆ ಮನವಿ ಮಾಡಿಕೊಂಡರು.
ಬೆಂಗಳೂರು(ನ. 10): ದುನಿಯಾ ವಿಜಿಯವರು ರಾಘವ ಉದಯ್'ನ ಮೃತದೇಹದ ಅಂತಿಮ ದರ್ಶನವನ್ನು ಪಡೆಯುವವರೆಗೂ ಅಂತ್ಯಸಂಸ್ಕಾರ ಕ್ರಿಯೆಯನ್ನು ಪ್ರಾರಂಭಿಸದಿರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಉದಯ್ ಅವರ ತಂದೆ, ತಮ್ಮ ಪುತ್ರನ ಅಂತಿಮ ದರ್ಶನ ಪಡೆಯುವಂತೆ ದುನಿಯಾ ವಿಜಿಯವರಲ್ಲಿ ಮನವಿ ಮಾಡಿಕೊಂಡರು. "ಕೆರೆಯಲ್ಲಿ ನೀವು ಸಾಕಷ್ಟು ಕಷ್ಟಪಟ್ಟಿದ್ದೀರಿ. ಈಗ ಶವ ಸಿಕ್ಕಾಗಿದೆ. ತಾವು ದಯವಿಟ್ಟು ಇಲ್ಲಿಗೆ ಬಂದು ನನ್ನ ಮಗನನ್ನು ನೋಡಬೇಕು ಎಂದು ಕೇಳಿಕೊಳ್ಳುತ್ತೇನೆ" ಎಂದು ಉದಯ್ ತಂದೆ ಹೇಳಿದರು. ದುನಿಯಾ ವಿಜಿಯಷ್ಟೇ ಅಲ್ಲ, ಸಾಹಸ ನಿರ್ದೇಶಕ ರವಿ ವರ್ಮಾ ಸೇರಿದಂತೆ ಚಿತ್ರರಂಗದ ಸ್ನೇಹಿತರು ಅಂತ್ಯಸಂಸ್ಕಾರಕ್ಕೆ ಆಗಮಿಸಬೇಕು ಎಂದೂ ಉದಯ್ ತಂದೆ ಮನವಿ ಮಾಡಿಕೊಂಡರು.
ಇದೇ ವೇಳೆ, ಉದಯ್ ಮತ್ತು ಅನಿಲ್ ಇಬ್ಬರ ಅಂತ್ಯಸಂಸ್ಕಾರವನ್ನು ಒಂದೇ ಕಡೆ ಒಮ್ಮೆಗೇ ನಡೆಸಲಾಗುವುದು ಎಂಬ ಸುದ್ದಿಯನ್ನು ಉದಯ್ ತಂದೆ ಅಲ್ಲಗಳೆದಿದ್ದಾರೆ. "ಒಂದೇ ಕಡೆ ಅಂತ್ಯಸಂಸ್ಕಾರ ಮಾಡುವುದಿಲ್ಲ. ಅವರ ಶಾಸ್ತ್ರವೇ ಬೇರೆ, ನಮ್ಮ ಶಾಸ್ತ್ರವೇ ಬೇರೆ. ನಮ್ಮ ನೆಂಟರಿಷ್ಟರ ಸಮ್ಮುಖದಲ್ಲಿ ನಾವು ಮಣ್ಣ ಮಾಡಲು ನಿರ್ಧರಿಸಿದ್ದೇವೆ" ಎಂದವರು ಸ್ಪಷ್ಟಪಡಿಸಿದರು.
ಇಂದು ಗುರುವಾರ ಬೆಳಗ್ಗೆ 10 ಗಂಟೆಗೆ ಬನಶಂಕರಿಯಲ್ಲಿರುವ ರುದ್ರಭೂಮಿಯಲ್ಲಿ ರಾಘವ ಉದಯ್'ನ ಅಂತ್ಯಸಂಸ್ಕಾರ ನೆರವೇರಲು ನಿಶ್ಚಯಿಸಲಾಗಿದೆ.
