ಮಕ್ಕಳ ಕಳ್ಳರ ಬಗ್ಗೆ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ ತಮಿಳುನಾಡಿನಲ್ಲಿ ಆತಂಕ ಸೃಷ್ಟಿಸಿದ ಮೇಸೇಜ್‌ಗಳು ಥಳಿಸಿ ಇಬ್ಬರು ವ್ಯಕ್ತಿಗಳ ಹತ್ಯೆ
ಬೆಂಗಳೂರು/ ಚೆನ್ನೈ [ಮೇ.11] : ವಾಟ್ಸಪ್‌ನಲ್ಲಿ ಮಕ್ಕಳ ಕಳ್ಳರ ಬಗ್ಗೆ ಹರಿದಾಡುತ್ತಿರುವ ’ಸುಳ್ಳು’ ಸುದ್ದಿ ತಮಿಳುನಾಡಿನಾದ್ಯಂತ ಆತಂಕ ಸೃಷ್ಟಿಸಿದ್ದು, ಇಬ್ಬರ ಹತ್ಯೆಗೆ ಕಾರಣವಾಗಿದೆ.
ವಲಸಿಗರನ್ನು ನಂಬಬೇಡಿ, ಅವರು ಮಕ್ಕಳ ಕಳ್ಳಸಾಗಾಣಿಕೆ ಗ್ಯಾಂಗ್‌ನ ಭಾಗವಾಗಿದ್ದಾರೆಂಬ ಸಂದೇಶಗಳು ವಾಟ್ಸಪ್’ನಲ್ಲಿ ಹರಿದಾಡುತ್ತಿವೆ. ಇದರ ಪರಿಣಾಮವಾಗಿ ಕೇವಲ 24 ಗಂಟೆಗಳ ಅವಧಿಯಲ್ಲಿ, ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಿ ಹತ್ಯೆಗೈಯಲಾಗಿದೆ.
ಮಕ್ಕಳನ್ನು ಕದಿಯುವವ ಎಂಬ ಗುಮಾನಿಯ ಮೇರೆಗೆ ಪುಲಿಕಟ್ ಎಂಬಲ್ಲಿ ಓರ್ವ ಉತ್ತರ ಭಾರತೀಯನನ್ನು ವ್ಯಕ್ತಿಯನ್ನು, ಗುಂಪೊಂದು ಥಳಿಸಿ ಕೊಂದಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಬುಧವಾರ ತಿರುವಣ್ಣಮಲೈ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ’ಮಕ್ಕಳನ್ನು ಕದಿಯುವ’ ಗುಮಾನಿಯ ಮೇಲೆ ಗ್ರಾಮಸ್ಥರು 63 ವರ್ಷ ಪ್ರಾಯದ ಮಹಿಳೆಯನ್ನು ಥಳಿಸಿ ಹತ್ಯೆಗೈದಿದ್ದಾರೆ. ಈ ಘಟನೆಯಲ್ಲಿ, ಕಾರಿನಲ್ಲಿದ್ದ ಆಕೆಯ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾಸ್ತವದಲ್ಲಿ ಆಕೆ ತನ್ನ ಸಂಬಂಧಿಕರನ್ನು ಭೇಟಿಯಾಗಲು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಆ ಗ್ರಾಮದಲ್ಲಿ ಕಾರು ನಿಲ್ಲಿಸಲಾಗಿತ್ತು. ಕಾರಿನ ಬಳಿ ಬಂದಿದ್ದ ಮಕ್ಕಳಿಗೆ ಅಕ್ಕರೆಯಿಂದ ಆ ಮಹಿಳೆ ತನ್ನ ಬಳಿ ಇದ್ದ ಚಾಕೋಲೇಟ್ ನೀಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು, ಮಕ್ಕಳನ್ನು ಕದಿಯುವ ಪ್ರಯತ್ನವೆಂದು ಥಳಿಸಲಾರಂಭಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ, ಇದೇ ಅನುಮಾನದ ಮೇರೆಗೆ ಉತ್ತರ ಭಾರತೀಯ ಕಾರ್ಮಿಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಬರ್ಬರವಾಗಿ ಥಳಿಸಲಾಗಿದೆ. ತಿರುವಲ್ಲರ್ ಜಿಲ್ಲೆಯಲ್ಲಿ ತೃತೀಯಲಿಂಗಿ ಮೇಲೆ ಅಂತಹದ್ದೇ ಕಾರಣಕ್ಕೆ ಹಲ್ಲೆ ನಡೆಸಿಲಾಗಿದೆ. ಇಂತಹ ಇನ್ನೂ ಹಲವಾರು ಘಟನೆಗಳು ವರದಿಯಾಗುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಾಟ್ಸಪ್‌ನಲ್ಲಿ ಬರುವ ಎಲ್ಲಾ ಸುದ್ದಿಗಳು ನಿಜವಲ್ಲ. ಸಾರ್ವಜನಿಕರು ಯಾವುದೇ ಪುರಾವೆಯಿಲ್ಲದೇ ಅವುಗಳನ್ನು ನಂಬಬಾರದು. ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು,ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲೂ ವದಂತಿ:
ಇತ್ತ ಬೆಂಗಳೂರಿನಲ್ಲೂ ಇಂತಹ ವಾಟ್ಸಪ್ ಸಂದೇಶಗಳು ಹರಿದಾಡುತ್ತಿವೆ. 200 ಮಂದಿ ಮಕ್ಕಳನ್ನು ಕದಿಯುವವರು ನಗರಕ್ಕೆ ಪ್ರವೇಶಿಸಿದ್ದಾರೆ. ಈಗಾಗಲೇ 10 ಮಂದಿಯನ್ನು ಬಂಧಿಸಲಾಗಿದೆ. ಎಂಬಿತ್ಯಾದಿ ಸಂದೇಶಗಳು ಹರಿದಾಡುತ್ತಿವೆಯೆನ್ನಲಾಗಿದೆ.
ಅದಕ್ಕೆ ಪ್ರತಿಕ್ರಿಯಿಸಿಸರುವ ಬೆಂಗಳೂರು ಪೊಲೀಸರು, ಈ ಸುದ್ದಿಗಳೆಲ್ಲಾ ಸುಳ್ಳು, ಬರೇ ವದಂತಿಯಷ್ಟೇ. ಸಾರ್ವಜನಿಕರು ಅವುಗಳನ್ನು ನಂಬಿ ಆತಂಕಕ್ಕೊಳಗಾಗಬಾರದೆಂದು ಮನವಿ ಮಾಡಿಕೊಂಡಿದ್ದಾರೆ.
[ಕನ್ನಡ ಪ್ರಭ ಓದಲು http://epaperkannadaprabha.com ಕ್ಲಿಕ್ ಮಾಡಿ]
