ಮಂತ್ರಕ್ಕೆ ಮಾವಿನ ಕಾಯಿ ಉದುರಲ್ಲ. ಹಾಗೆಯೇ ಮಂತ್ರಕ್ಕೆ ಸಂತಾನ ಭಾಗ್ಯವೂ ಆಗಲ್ಲ. ಸತಿ ಪತಿ ಕಲಹವೂ ಬಗೆಹರಿಯಲ್ಲ. ಗೃಹ ದೋಷ, ಲೈಂಗಿಕ ಸಮಸ್ಯೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವ ಜ್ಯೋತಿಷಿಗಳ ವಂಚನಾ ಜಾಲದ ವಿರುದ್ಧ ಸುವರ್ಣ ನ್ಯೂಸ್ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ಮಂಗಳೂರು(ಜ.09): ಮಂತ್ರಕ್ಕೆ ಮಾವಿನ ಕಾಯಿ ಉದುರಲ್ಲ. ಹಾಗೆಯೇ ಮಂತ್ರಕ್ಕೆ ಸಂತಾನ ಭಾಗ್ಯವೂ ಆಗಲ್ಲ. ಸತಿ ಪತಿ ಕಲಹವೂ ಬಗೆಹರಿಯಲ್ಲ. ಗೃಹ ದೋಷ, ಲೈಂಗಿಕ ಸಮಸ್ಯೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವ ಜ್ಯೋತಿಷಿಗಳ ವಂಚನಾ ಜಾಲದ ವಿರುದ್ಧ ಸುವರ್ಣ ನ್ಯೂಸ್ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ವಂಚಕ ಜ್ಯೋತಿಷಿ ರೆಡ್ಹ್ಯಾಂಡ್ ಸೆರೆ
ವಿವಿಧ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡಲಾಗುವುದು ಅಂತ ಅಮಾಯಕರನ್ನು ವಂಚಿಸುತ್ತಿದ್ದ ಕಪಟಿ ಜ್ಯೋತಿಷ್ಯಾಲಯಗಳ ವಿರುದ್ಧ ಸುವರ್ಣ ನ್ಯೂಸ್ ಸಮರ ಸಾರಿದೆ. ಮಂಗಳೂರಿನ ಜ್ಯೋತಿಷ್ಯಾಲಯವೊಂದರ ವಿರುದ್ಧದ ಕಾರ್ಯಾಚರಣೆಯಲ್ಲಿ ಮುಗ್ಧ ಮಹಿಳೆಯನ್ನು ವಂಚಿಸುತ್ತಿದ್ದ ದುರುಳನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದೆ. ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಈ ಅಭಿಯಾನಕ್ಕೆ ಸಾಥ್ ನೀಡಿದ್ದು, ಆರೋಪಿ ರಾಮಕೃಷ್ಣ ಶರ್ಮಾನ ಬಣ್ಣ ಬಯಲಾಗಿದೆ.
ಕಷ್ಟ ನಿವಾರಣೆಗೆ ಈತನ ಪರಿಹಾರ ಏನು ಗೊತ್ತಾ?
ಕಾರ್ಯಾಚರಣೆಯ ಭಾಗವಾಗಿ ನರೇಂದ್ರ ನಾಯಕ್ ಮತ್ತು ಸಾಮಾಜಿಕ ಕಾರ್ಯಕರ್ತೆಯೊಬ್ಬರು ತಂದೆ ಮಗಳಂತೆ ನಟಿಸಿ ಕಪಟಿ ಜ್ಯೋತಿಷಿ ಬಳಿಗೆ ಹೋಗಿದ್ದರು. ಮದುವೆಯಾಗಿ 10 ವರ್ಷವಾಗಿದ್ದರೂ ಮಗುವಾಗಿಲ್ಲ.. ಸಂತಾನ ಭಾಗ್ಯಕ್ಕಾಗಿ ವಿನಂತಿಸಲಾಯಿತು. ವಿಶಿಷ್ಟ ಪೂಜೆ, ತಾಯತ ಹಾಗೂ ಗೋಕುಲ ಮಂತ್ರ ಮಾಡುವುದಾಗಿ ಹೇಳಿ 10 ಸಾವಿರದ 300 ರೂಪಾಯಿ ನೀಡುವಂತೆ ಹೇಳಿದ್ದಾನೆ. ಅಲ್ದೆ, ಅಡ್ವಾನ್ಸ್ ಅಂತ 2 ಸಾವಿರ ರೂಪಾಯಿ ರಾಮಕೃಷ್ಣ ಶರ್ಮ ಪಡೆದಿದ್ದಾನೆ. ಈ ಕಾರ್ಯಾಚರಣೆ ನಡೀತಿದ್ದಂತೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಪಟಿ ಜ್ಯೋತಿಷಿಯನ್ನ ಬಂಧಿಸಿದರು.
ಬ್ರಾಹ್ಮಣನ ಜೊತೆ ಮಲಗಿದರೆ ಎಲ್ಲಾ ಸರಿ ಹೋಗುತ್ತಂತೆ!
ಇನ್ನು ಕಪಟಿ ಜ್ಯೋತಿಷಿ ವಿರುದ್ಧ ಸಂತ್ರಸ್ತೆ ಆಕ್ರೋಶ ವ್ಯಕ್ತಪಡಿಸಿದ್ರು. ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಅಲ್ಲದೇ ಸಮಸ್ಯೆ ಪರಿಹರಿಸಿಕೊಳ್ಳಬೇಕಾದ್ರೆ ಒಂದು ರಾತ್ರಿ ಬ್ರಾಹ್ಮಣನ ಜೊತೆ ಮಲಗುವಂತೆ ರಾಮಕೃಷ್ಣ ಶರ್ಮಾ ಹೇಳಿದ್ದರು ಅಂತ ಸಂತ್ರಸ್ತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಒಟ್ಟಿನಲ್ಲಿ ಇದು ಒಂದು ದೊಡ್ಡ ವಂಚನೆಯ ಜಾಲ ಅನ್ನೋ ಶಂಕೆ ವ್ಯಕ್ತವಾಗಿದೆ. ಜೀವನದಲ್ಲಿ ನೊಂದು ಪರಿಹಾರದ ಹುಡುಕಾಟದಲ್ಲಿರೋ ನೊಂದ ಮನಸುಗಳನ್ನ ವಂಚಿಸಲಾಗುತ್ತಿದೆ.
