Asianet Suvarna News Asianet Suvarna News

ಬಂದಿದೆ 2000 ರು. ಖೋಟಾನೋಟು!

ಅಸಲಿಯಂತೇ ಕಾಣುವ ₹2000 ನಕಲಿ ನೋಟು | ಪಾಕಿಸ್ತಾನದಿಂದ ದಂಧೆ | ದೆಹಲಿಯಲ್ಲಿ ಬಯಲು

Fake Notes of Rs 2000

ನವದೆಹಲಿ: ನಕಲಿ ನೋಟು ನಿಗ್ರಹವನ್ನೂ ಮುಖ್ಯ ಉದ್ದೇಶವಾಗಿಟ್ಟು ಕೊಂಡು ಕೇಂದ್ರ ಸರ್ಕಾರ ಕಳೆದ ವರ್ಷ ಅಪನಗದೀಕರಣ ಘೋಷಿಸಿತ್ತು. ಜೊತೆ 2000 ರು.ಮೌಲ್ಯದ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದರಲ್ಲಿನ ಭದ್ರತಾ ಅಂಶಗಳ ನಕಲು ಸಾಧ್ಯವಿಲ್ಲ ಎಂದಿತ್ತು. ಆದರೆ ಭಾರತಕ್ಕೆ ಉಗ್ರರನ್ನು ನುಸುಳಿಸುವ ಜೊತೆಜೊತೆಗೆ ಆರ್ಥಿಕ ಭಯೋತ್ಪಾದನೆ ನಡೆಸುವ ಪಾಕಿಸ್ತಾನ, 2000 ರು.ಮೌಲ್ಯದ ಹೊಸ ನೋಟುಗಳನ್ನೂ ನಕಲಿ ಮಾಡಿ ಭಾರತಕ್ಕೆ ಪೂರೈಕೆ ಮಾಡುತ್ತಿರುವ ಆಘಾತಕಾರಿ ವಿಷಯ ಇದೀಗ ಬೆಳಕಿಗೆ ಬಂದಿದೆ.

ಅಪನಗದೀಕರಣದ ಬಳಿಕ ಕೇಂದ್ರ ಸರ್ಕಾರ 2000 ರು.ಮೌಲ್ಯದ ನೋಟುಗಳನ್ನು ಬಿಡುಗಡೆ ಮಾಡಿದಾಗ, ಇದರಲ್ಲಿನ ಭದ್ರತಾ ಅಂಶಗಳನ್ನು ನಕಲು ಮಾಡುವುದು ಅಷ್ಟು ಸುಲಭವಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನಕಲಿ ನೋಟುಗಳ ಹಾವಳಿ ಕಡಿಮೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿತ್ತು ಆದರೆ ದೆಹಲಿ, ಕೋಲ್ಕತಾದಲ್ಲಿ ಇತ್ತೀಚೆಗೆ ಪೊಲೀಸರು ವಶಪಡಿಸಿಕೊಂಡ ನಕಲಿ ನೋಟುಗಳು, ಸರ್ಕಾರದ ವಾದವನ್ನೇ ಪ್ರಶ್ನಿಸುವಂತೆ ಮಾಡಿದೆ.

ಕಾರಣ, ವಶಪಡಿಸಿಕೊಂಡ ನಕಲಿ ನೋಟುಗಳಲ್ಲಿ, ಮೂಲ ನೋಟುಗಳಲ್ಲಿನ ವಾಟರ್‌ಮಾರ್ಕ್, ಸೆಕ್ಯುರಿಟಿ ಥ್ರೆಡ್ ಸೇರಿದಂತೆ ಹಲವು ಭದ್ರತಾ ಅಂಶಗಳು ಇದ್ದು, ಇದು ಪೊಲಿಸರನ್ನೇ ಬೆರಗಾಗಿಸಿದೆ. ಎರಡು ದಿನಗಳ ಹಿಂದೆ ದೆಹಲಿಯಲ್ಲಿ ಪೊಲೀಸರು 6.6 ಲಕ್ಷ ರು.ಮೌಲ್ಯದ 2000 ರು.ನ ನಕಲಿ ನೋಟು ವಶಪಡಿಸಿಕೊಂಡು, ಕಾಶಿದ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕಳೆದ 4-5 ತಿಂಗಳ ಅವಧಿಯಲ್ಲಿ ತಾನು ಅಂದಾಜು 2 ಕೋಟಿ ರು.ಮೌಲ್ಯದ ನಕಲಿ ನೋಟುಗಳನ್ನು ಸರಬರಾಜು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಪ್ರತಿ ನೋಟನ್ನು ತಾನು 600 ರು. ಕೊಟ್ಟು, ಖರೀದಿಸಿದ್ದು, ಅದನ್ನು 900 ರು.ಗೆ ಮಾರಿದ್ದೇನೆ. ಈ ಹಿಂದೆ 100 ರು.ಮೌಲ್ಯದ ನೋಟುಗಳನ್ನು 30 ರು.ಗೆ ಖರೀದಿಸಿ, 45 ರು.ಗೆ ಮಾರಾಟ ಮಾಡುತ್ತಿದ್ದೆ ಎಂದು ಇದೇ ಕಳ್ಳ ವ್ಯವಹಾರದಲ್ಲಿ 15 ವರ್ಷಗಳಿಂದ ತೊಡಗಿಸಿಕೊಂಡಿದ್ದ ಕಾಶಿದ್ ಹೇಳಿದ್ದಾನೆ.

ಅದಕ್ಕೂ ಎರಡು ದಿನ ಮೊದಲು ಎನ್‌ಐಎ ತಂಡ ಹೌರಾ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನಿಂದ 9 ಲಕ್ಷ ರು.ಮೌಲ್ಯದ 2000 ರು.ನ ನೋಟುಗಳನ್ನು ವಶಪಡಿಸಿಕೊಂಡಿತ್ತು. ಮೇಲ್ಕಂಡ ಎರಡೂ ಪ್ರಕರಣಗಳಲ್ಲಿ ವಶಪಡಿಸಿಕೊಂಡ 2000 ರು.ಮೌಲ್ಯದ ನೋಟುಗಳು ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು, ಯಾವುದೇ ಕಾರಣಕ್ಕೂ ಅನುಮಾನ ಮೂಡಿಸದು. ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಭದ್ರತಾ ಅಂಶಗಳನ್ನು ಕೂಡಾ ಹೊಂದಿವೆ.

ಹೀಗಾಗಿ ನಕಲಿ ನೋಟು ತಯಾರಕರ ಜಾಲ, ಹೊಸ ನೋಟಿನ ಬಹುತೇಕ ಲಕ್ಷಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರಬಹುದು ಎಂಬ ಆತಂಕ ಇದೀಗ ಕಾಡಿದೆ. ಬಾಂಗ್ಲಾ ಗಡಿ ಮೂಲಕ ಪೂರೈಕೆ: ಪಾಕಿಸ್ತಾನ ಈ ನಕಲಿ ನೋಟುಗಳನ್ನು ಮುದ್ರಿಸಿ ಅದನ್ನು ಬಾಂಗ್ಲಾದೇಶಕ್ಕೆ ರವಾನಿಸುತ್ತದೆ. ಇದನ್ನು ಬಾಂಗ್ಲಾ- ಭಾರತ ಗಡಿಯಲ್ಲಿ ಬರುವ ಬೇಲಿಯ ಮೂಲಕ ಭಾರತಕ್ಕೆ ಪೂರೈಕೆ ಮಾಡಲಾಗುತ್ತದೆ.

ಇತ್ತ ಕಡೆಯಿಂದ ನಿರ್ದಿಷ್ಟ ಮೌಲ್ಯದ ನೋಟುಗಳನ್ನು ಬೇಲಿಯ ಆಚೆಗೆ ಎಸೆದರೆ, ಅತ್ತ ಕಡೆಯಿಂದ ನಕಲಿ ನೋಟುಗಳನ್ನು ಇತ್ತ ಕಡೆ ಎಸೆಯಲಾಗುತ್ತದೆ. 2000 ರು.ಮೌಲ್ಯದ ಪ್ರತಿ ನೋಟಿಗೆ ಪಾಕ್ 600 ರು. ದರ ವಿಧಿಸುತ್ತದೆ. ಕಮೀಷನ್ ಆಸೆಗಾಗಿ ಗಡಿಯಲ್ಲಿನ ಹಲವಾರು ಜನ ಇದೇ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಬಂಧಿತ ಕಾಶಿದ್ ಹೇಳಿದ್ದಾನೆ.

(ಸಾಂದರ್ಭಿಕ ಚಿತ್ರ)

Follow Us:
Download App:
  • android
  • ios