ಬೆಂಗಳೂರು (ಸೆ. 24): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಬಳಿಕ ಸಾಕಷ್ಟು ಸುಳ್ಳುಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಸದ್ಯ ವಾಜಪೇಯಿ ಕುರಿತ ಮತ್ತೊಂದು ಸುದ್ದಿ ಭಾರೀ ವೈರಲ್ ಆಗಿದೆ.

ಅದರಲ್ಲಿ ವಾಜಪೇಯಿ ಮರಣದ ಬಳಿಕ ಅವರ ಚಿತಾಭಸ್ಮವನ್ನು ಅಮೆರಿಕದ ಅತಿ ದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಮಾರಾಟ ಮಾಡುತ್ತಿದೆ ಎಂದು ಹೇಳಲಾಗಿದೆ.

ಅಮೆಜಾನ್ ವಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಾಜಪೇಯಿ ಅವರ ಫೋಟೋವನ್ನು ಹಾಕಿ ಜೊತೆಗೆ ಚಿತಾಭಸ್ಮ ತುಂಬುವ ಮಡಕೆ ಇರುವ ಫೋಟೋದೊಂದಿಗೆ ‘ಅಟಲ್ ಜಿ ಅವರು ನಿಧನರಾದ ಬಳಿಕ ಅವರ ಚಿತಾಭಸ್ಮವಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಅವರ ಚಿತಾಭಸ್ಮವನ್ನು ಮಾರಾಟಕ್ಕಿಡಲಾಗಿದೆ. ಇದು ಭಾರತ ರತ್ನ ಪಡೆದ ಗಣ್ಯ ವ್ಯಕ್ತಿಗೆ ಮಾಡುತ್ತಿರುವ ಅವಮಾನ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

ಮತ್ತೆ ಕೆಲವರು ಇದೇ ಫೋಟೋವನ್ನು ಬಳಸಿ, ‘ನಮ್ಮನ್ನಗಲಿದ ವಾಜಪೇಯಿ ಅವರ ಚಿತಾಭಸ್ಮ ಮಾರಾಟಕ್ಕಿದೆ. ಬಹುಶಃ ಇದು ಭಾರತದಲ್ಲಿ ಮಾತ್ರ ಸಾಧ್ಯ’ ಎಂದು ಅಡಿಬರಹ ಬರೆದು ಶೇರ್ ಮಾಡಿದ್ದಾರೆ.

ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಈ ಸುದ್ದಿ ನಿಜವೇ ಎಂದರೆ ಉತ್ತರ ‘ಇಲ್ಲ’ ಎಂದು. ಅಮೆಜಾನ್‌ನಲ್ಲಿ ಈ ಕುರಿತು ಹುಡುಕ ಹೊರಟಾಗ ‘ಅಟಲ್ ಅವರ ಚಿತಾಭಸ್ಮ’ ಹೆಸರಿನ ಯಾವುದೇ ವಸ್ತುಗಳೂ ಮಾರಾಟಕ್ಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾಗಿ ವಾಜಪೇಯಿ ಚಿತಾಭಸ್ಮದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಹರಿದಾಡುತ್ತಿರುವ ಈ ಸುದ್ದಿ ಸುಳ್ಳು. 

-ವೈರಲ್ ಚೆಕ್