Fact Check| ನಿಯಮ ಪಾಲಿಸದಿದ್ರೆ ಟ್ರಾಫಿಕ್ ಪೊಲೀಸರಿಂದ ದಂಡದ ಜೊತೆ ಏಟು!
ರಸ್ತೆ ನಿಯಮ ಉಲ್ಲಂಘನೆಗೆ ಇನ್ನಿಲ್ಲದಂತೆ ಭಾರಿ ದಂಡ ವಿಧಿಸಲಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಚಾಲಕರ ಮೇಲೆ ದರ್ಪ ತೋರಿಸಿ ಅಕ್ರಮವಾಗಿ ಹಣ ವಸೂಲಿಗಿಳಿದಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
ನವದೆಹಲಿ[ಸೆ.10]: ಸಾಕಷ್ಟುವಿರೋಧದ ನಡುವೆಯೇ ಸೆಪ್ಟೆಂಬರ್ 1ರಿಂದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ದೇಶಾದ್ಯಂತ ಅನುಷ್ಠಾನಗೊಂಡಿದೆ. ರಸ್ತೆ ನಿಯಮ ಉಲ್ಲಂಘನೆಗೆ ಇನ್ನಿಲ್ಲದಂತೆ ಭಾರಿ ದಂಡ ವಿಧಿಸಲಾಗುತ್ತಿದೆ. ಇದರ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಚಾಲಕರ ಮೇಲೆ ದರ್ಪ ತೋರಿಸಿ ಅಕ್ರಮವಾಗಿ ಹಣ ವಸೂಲಿಗಿಳಿದಿದ್ದಾರೆ ಎನ್ನುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ಜನರ ಮೇಲೆ ಲಾಠಿ ಚಾಜ್‌ರ್ ಮಾಡಿ, ಪೊಲೀಸ್ ಜೀಪ್‌ನಲ್ಲಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ.
ಆದರೆ ನಿಜಕ್ಕೂ ಸಂಚಾರಿ ನಿಯಮ ಪಾಲನೆ ಮಾಡದ ಜನರ ಮೇಲೆ ಪೊಲೀಸರು ಈ ರೀತಿಯ ದರ್ಪ ತೋರಿದ್ದರೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಯಾವುದೋ ಘಟನೆಯ ವಿಡಿಯೋವನ್ನು ಇನ್ಯಾವುದೋ ಸಂದರ್ಭಕ್ಕೆ ಸರಿಹೊಂದುವಂತೆ ಎಡಿಟ್ ಮಾಡಿ, ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಮೂಲ ವಿಡಿಯೋ ಪತ್ತೆಯಾಗಿದೆ. ವಾಸ್ತವವಾಗಿ ಈ ಘಟನೆ ನಡೆದಿದ್ದು ರಾಜಸ್ಥಾನದ ಅಲ್ವಾರ್‌ನಲ್ಲಿ. ಅಲ್ಲದೆ ಮೋಟಾರು ವಾಹನ ಕಾಯ್ದೆ ಅನುಷ್ಠಾನಗೊಳ್ಳುವ ಮುಂಚೆಯೇ ಈ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದೆ.
ಅಲ್ವಾರ್‌ನ ರಾಜ್ ರಿಷಿ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಚುನಾವಣೆ ನಂತರ ಫಲಿತಾಂಶದ ದಿನ ಕೆಲ ಪ್ರತಿಭಟನಾಕಾರರು ಶಾಂತಿಭಂಗಕ್ಕೆ ಪ್ರಯತ್ನಿಸಿದ್ದರು. ಈ ವೇಳೆ ಪೊಲೀಸರು ಲಾಠಿ ಚಾಜ್‌ರ್ ಮಾಡಿದ್ದರು. ಈ ವಿಡಿಯೋವನ್ನು ಪೋಸ್ಟ್ ಮಾಡಿ, ಮೋಟಾರು ವಾಹನ ಕಾಯ್ದೆ ಅನುಷ್ಠಾನದ ಬಳಿಕ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.