ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ನೌಕೆಯು ಉಡಾವಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಚಂದ್ರಯಾನ-2 ಚಂದ್ರನ ಕಕ್ಷೆ ತಲುಪಿ ಭೂಮಿಯ ಚಿತ್ರಗಳನ್ನು ಕಳುಹಿಸಿದೆ ಎಂಬ ಶೀರ್ಷಿಕೆಯಡಿ ಸಾಕಷ್ಟುಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಿಜನಾ ಈ ಸುದ್ದಿ? ಏನಿದರ ಅಸಲಿಯತ್ತು? ಈ ಸುದ್ದಿ ಓದಿ. 

ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ನೌಕೆಯು ಉಡಾವಣೆಯಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಆಗಲೇ ಚಂದ್ರಯಾನ-2 ಚಂದ್ರನ ಕಕ್ಷೆ ತಲುಪಿ ಭೂಮಿಯ ಚಿತ್ರಗಳನ್ನು ಕಳುಹಿಸಿದೆ ಎಂಬ ಶೀರ್ಷಿಕೆಯಡಿ ಸಾಕಷ್ಟುಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

‘ಮನಮೋಹಕ ಚಿತ್ರಗಳು’ ಎಂದು ಒಕ್ಕಣೆ ಬರೆದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗುತ್ತಿದೆ. ಆದರೆ ಇವುಗಳ ಸತ್ಯಾಸತ್ಯ ಏನೆಂದು ಪರಿಶೀಲಿಸಿದಾಗ ಚಂದ್ರಯಾನ-2 ಇದುವರೆಗೆ ಯಾವುದೇ ಫೋಟೋಗಳನ್ನು ಭೂಮಿಗೆ ರವಾನಿಸಿಲ್ಲ ಎಂದು ತಿಳಿದುಬಂದಿದೆ. ಇಸ್ರೋ ಕೂಡ ಈ ಬಗ್ಗೆ ತನ್ನ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಿಲ್ಲ.

ಅಲ್ಲದೆ ಟೈಮ್ಸ್‌ ಸುದ್ದಿ ಸಂಸ್ಥೆಯು ಈ ಬಗ್ಗೆ ಸ್ಪಷ್ಟೀಕರಣ ಪಡೆಯಲು ಇಸ್ರೋನ ಸಾರ್ವಜನಿಕ ಸಂಪರ್ಕಾಧಿಯಾರಿಯನ್ನು ಸಂಪರ್ಕಿಸಿದ್ದು ಅವರೂ‘ ಇದು ಸುಳ್ಳುಸುದ್ದಿ. ಚಂದ್ರಯಾನ ನೌಕೆಯು ಯಾವುದೇ ಫೋಟೋವನ್ನು ಕಳುಹಿಸಿಲ್ಲ. ಮೇಲಾಗಿ ನೌಕೆಯು ಚಂದ್ರನ ಮೇಲ್ಮೈ ತಲುಪುವುದೇ ಆಗಸ್ಟ್‌ 20ರ ನಂತರ’ ಎಂದಿದ್ದಾರೆ.

ಸ್ಪಷ್ಟನೆ ಪಡೆದ ಬಳಿಕ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ವೈರಲ್‌ ಆಗಿರುವ ಚಿತ್ರ ನೈಜತೆ ಬಯಲಾಗಿದೆ. ಮೊದಲ ಚಿತ್ರವು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ್ದು ಎಂದು ಹೇಳಲಾಗಿದೆ. ಇನ್ನು 2ನೇ ಚಿತ್ರ ಐಫೋನ್‌ ವಾಲ್‌ಪೇಪರ್‌ನಲ್ಲಿರುವ ಫೋಟೋ.

ಇನ್ನು ಮೂರನೇ ಚಿತ್ರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್‌)ದ ವಿದೇಶಿ ಗಗನಯಾತ್ರಿಗಳು ತೆಗೆದ ಫೋಟೋ. ರಷ್ಯಾದ ಕುರಿಲ್‌ ದ್ವೀಪದಲ್ಲಿ ವಾಲ್ಕನೋ ಬಿಡುಗಡೆಯಾಗುವ ದೃಶ್ಯ. ಒಟ್ಟಾರೆ ಯಾವುದೋ ಫೋಟೋಗಳನ್ನು ಪೋಸ್ಟ್‌ ಮಾಡಿ, ಚಂದ್ರಯಾನ-2 ಕಳುಹಿಸಿದ ಫೋಟೋ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

- ವೈರಲ್ ಚೆಕ್