ಜಪಾನಿನ ರೆಸ್ಟೋರೆಂಟ್‌ವೊಂದು ಮಾನವ ಮಾಂಸದಿಂದ ತಯಾರಿಸಲಾದ ಖಾದ್ಯವನ್ನು ಜನರಿಗೆ ಬಡಿಸುತ್ತಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೆಬ್‌ಸೈಟ್‌ವೊಂದು ಈ ಬಗ್ಗೆ ವರದಿ ಮಾಡಿದೆ ಎಂದು ಲಿಂಕ್‌ಅನ್ನು ನೆಟ್ಟಿಗರು ಶೇರ್‌ ಮಾಡುತ್ತಿದ್ದರೆ.

ಅದರಲ್ಲಿ, ‘ಮಾನವ ಮಾಂಸದಿಂದ ತಯಾರಿಸಲಾದ ಖಾದ್ಯವಿರುವ ಜಗತ್ತಿನ ಮೊದಲ ರೆಸ್ಟೋರೆಂಟ್‌’ ಎಂಬ ಶೀರ್ಷಿಕೆಯಡಿ, ‘ಜಪಾನ್‌ ರಾಜಧಾನಿ ಟೋಕಿಯೋದಲ್ಲಿ ಮಾನವ ಮಾಂಸದಿಂದ ವಿವಿಧ ಖಾದ್ಯಗಳನ್ನು ಸಿದ್ಧಪಡಿಸುವ ರೆಸ್ಟೊರೆಂಟನ್ನು ತೆರೆಯಲಾಗಿದೆ.

ಮಾನವ ಮಾಂಸವನ್ನು ಸಕ್ರಮಾವಾಗಿ ಮಾರಾಟ ಮಾಡುವ ವಿಶ್ವದ ಮೊಟ್ಟಮೊದಲ ರೆಸ್ಟೋರೆಂಟ್‌ ಇದು. ರೆಸ್ಟೋರೆಂಟ್‌ ಹೆಸರು ‘ದ ರೆಸ್ಟೋ ಒಟೋಟೋ ನೊ ಶೋಕು ರ್ಯೋಹಿನ್‌.’ ಜಪಾನಿನ ಜನ ಮತ್ತು ಜಗತ್ತಿನಾದ್ಯಂತ ಬರುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ’ಎಂದು ಹೇಳಲಾಗಿದೆ.

ಈ ಲೇಖನದ ನಡುವಲ್ಲಿ, ‘ಮೇಲೆ ನೀಡಲಾಗಿರುವ ಮಾಹಿತಿಯ ಬಗ್ಗೆ ಯಾವುದೇ ದೃಡೀಕರಣ ನೀಡಲಾಗುವುದಿಲ್ಲ’ ಎಂದು ಸೂಚನೆ ನೀಡಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ ಇಂಡಿಯಾ ಟುಡೇ ಸುದ್ದಿಸಂಸ್ಥೆ ಈ ಸುದ್ದಿ ಸತ್ಯಾಸತ್ಯ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ಸಾಬೀತಾಗಿದೆ. ಅಲ್ಲದೆ ಫ್ಯಾಕ್ಟ್ಚೆಕ್‌ ವೆಬ್‌ಸೈಟ್‌ ‘ಸ್ನೋಪ್‌’ 2017ರಲ್ಲಿಯೇ ಈ ಬಗ್ಗೆ ತನಿಖೆ ಮಾಡಿ ಇದು ಸುಳ್ಳು ಎಂದು ಸಾಬೀತು ಮಾಡಿದೆ. ಅಮೆರಿಕದಲ್ಲಿರುವ ಜಪಾನ್‌ ರಾಯಭಾರ ಕಚೇರಿ ಈ ಸುದ್ದಿಯನ್ನು ಅಲ್ಲಗಳೆದಿದ್ದು, ವೆಬ್‌ಸೈಟ್‌ನಲ್ಲಿ ಹೇಳಲಾದ ಹೆಸರಿನ ರೆಸ್ಟೋರೆಂಟ್‌ ಜಪಾನಿನಲ್ಲಿ ಇಲ್ಲ’ ಎಂದು ಸ್ಪಷ್ಟಪಡಿಸಿದೆ.

- ವೈರಲ್ ಚೆಕ್